ಎಷ್ಟೆಷ್ಟು ಮೊಗಗಳಿಂದೀಕ್ಷಿಸುತ ಚೋದಿಸಿಹೆ
ನೋವಿಗಂಜುವ ಹೃದಯವನು ಹಂಬಲಿಸಲು
ಬರುವ ಬಾಧೆಗಳರಿವಿನಳುಕಿನಲೆ ಹೊರಟಿಹೆನು
ನಿನ್ನ ತಂತ್ರಗಳೆದುರು ಭವಿಸಿ ಭಾವಿಸಲು
ದನಿಯಿರುವ ದನಿಯಾಚೆಗಿರುವಂತಿರುವ ನಿನ್ನ
ಇಬ್ಬಗೆಯ ಸೋಗುಗಳನಾರಾಧಿಸಿರುವೆ
ಆದರೂ ನೋಡು ನೀನವುಗಳಾಸರೆಯಿಂದ
ಒಲವಿರದ ಒಣಸುಯಿಲಿಗೆನ್ನ ದೂಡಿರುವೆ
ಎಲ್ಲೊ ಮೂಲೆಯಲಿ ಮರೆಯಾಗುಳಿದ ವೀಣೆಯದು
ನನ್ನೆದೆಯು ಅದ ಮೀಟಿ ನುಡಿಸುವವರಿಲ್ಲ
ಅದರಂತರಾಳದಲ್ಲೆಲ್ಲ ಶೋಕದ ಲೇಪ
ನಾದಿಸುವ ನಿನ್ನ ಕೈಸ್ಪರ್ಶವದಕಿಲ್ಲ
ಸವಿಗಾನವಾಯಿತೇ ಕರ್ಣಗಳಿಗಹಿತ?
ಇಂಪೆನಿಸಿ ಮೋದಿಸೀತೇ ಶೋಕಗೀತ?
Original by The Inevitable Word
https://medium.com/inevitable-word/harp-unplayed-4d114d4d8732