Tuesday, November 16, 2021

ಮೇಘ ವಾರಿ



'ದೂರದಾಗಸದ ಗೆಳೆಯ ಅದರ ಸಹವಾಸಿ ಮೇಘ ನೀನು

ಚಿಮ್ಮಿ ಚಿಮ್ಮಿ ತೊನೆದಾಡಿ ಹಂಬಲಿಸಿ ಮೊರೆವ ತೆರೆಯು ನಾನು

ಕೈಯ ಚಾಚೆ ನಿಲುಕುವುದು ನಿನಗೆ ಆ ನೀಲದ ಅನಂತ

ಕಾಯುತಿಹೆನು ಎಂದಾದರೊಂದು ದಿನ ಮಿಡಿವುದೇ ದಿಗಂತ'


'ಕೇಳು! ಮರೆತೆಯಾ ನೀನು ನಾನೇ ಆಗಿದ್ದ ದಿವ್ಯಘಳಿಗೆ

ಘನದ ಹಂಗು ತೊರೆಯುತ್ತ ನೀನೆ ಬಂದಿದ್ದೆ ನನ್ನ ಬಳಿಗೆ

ಬಾನ ನೀಲ ತಾ ಸಾಕ್ಷಿಯಾಗಿ ಕಾಯುತಿದೆ ನಮ್ಮ ದಾರಿ

ನಮ್ಮಲೆಲ್ಲೋ ಅವಿತಿಹುದು ಬಗೆವ ನಡೆ ಕೂಡಿ ಮೇಘ ವಾರಿ'

 

ನಿಧಿ


ಅದೊಂದು ದಣಿವಿರದ ದಿನ. ಮನಸ್ಸಿನ ಯಾವುದೋ ಸೊಂಪಾದ ಮೂಲೆಯಲ್ಲಿ ಹುಲ್ಲು ಮೆತ್ತೆಯ ಮೇಲೆ ಮರದ ತಂಪಿನಡಿ ಭಾವನೆಗಳು ಕೈಕಾಲು ಚಾಚಿ ವಿರಮಿಸಿದ್ದವು. ಮರವಾದರೋ ಗಾಳಿ ಬೀಸಿದಾಗಲೆಲ್ಲ ಉದಾರವಾಗಿ ಹೂಗಳನ್ನು ಉದುರಿಸುತ್ತ ವಿಶಿಷ್ಟ ಘಮಲಿನಲ್ಲಿ ಅವನ್ನು ಮೀಯಿಸುತ್ತಿತ್ತು. ಆ ಘಳಿಗೆಯಲ್ಲಿದ್ದದ್ದು, ಮಾಗಿಯ ಚಳಿಯಲ್ಲಿ ಅಂಗಳದ ತುಳಸಿಕಟ್ಟೆಯನ್ನು ಸುತ್ತುವಾಗ ತುಸುವೇ ಚುರುಕಾದ ಎಳೆಬಿಸಿಲಿನ ಸಂವೇದನೆಯಂತಹ ನಿಸ್ಪೃಹ ಪರಿಪೂರ್ಣತೆ. ಅದರ ಬೆನ್ನಲ್ಲೇ ಒಮ್ಮೆಲೇ ಆವರಿಸಿದ್ದು ಆತಂಕ. ಈ ಸಾಂಗತೆ ಉಳಿದೀತೆ? ಅಲ್ಲೇ ಎಲ್ಲೋ ಜೊಂಪೆಯ ಹಿಂದೆ ಹೊಂಚುಹಾಕುತ್ತಾ  ಅವಿತು ಕುಳಿತಿದ್ದಾನೆ ಕಾಲ. ಆದಷ್ಟು ಬೇಗ ಗಾಜಿನ ಭರಣಿಯಲ್ಲಿ ಇದನ್ನೆಲ್ಲಾ ತುಂಬಿ ಭದ್ರವಾಗಿ ಬಿರಟೆ ಹಚ್ಚಿಬಿಡುವುದೊಳಿತು. ಆ ಮರದಡಿ ಮಣ್ಣು ಬಗೆದು ಅದನ್ನು ಹುದುಗಿಸಿಬಿಟ್ಟರೊಳಿತು. ಮತ್ತೆ ಎಂದಾದರೂ ಈ ದಾರಿಯನ್ನು ಹಾಯುವಾಗ ಹಂಬಲಿಕೆಯಾದರೆ ಬಿಚ್ಚಿ ನೋಡಬಹುದು.
ಬಿರುಗಾಳಿ, ಮಳೆ, ಬಿಸಿಲುಗಳ ಕರಾಳಗಳೊಳಗೂ ಆ ಏಕಾಂತ ಮೂಲೆಯ ಗಾಜಿನ ಗೂಡಿನಲ್ಲಿ ತನ್ನಷ್ಟಕ್ಕೆ ಅಂತರ್ಮುಖಿಯಾಗಿ ಬೆಚ್ಚಗಿದ್ದೀತು. ಹೊಂಬಿಸಿಲಿನ, ಬೆಳದಿಂಗಳಿನ ದಿನಗಳಲ್ಲಿ ಮತ್ತೆ ಕೆದಕಿ, ಇಣುಕಿ, ಹುದುಗಿಸಿದರಾಯಿತು.  ಜಡಿ ಮಳೆಯಾದರೆ ಹಾದಿಯೇ  ದುಸ್ತರ.  ತೊರೆದ ಬುತ್ತಿಗೆ ಹಾತೊರೆದು ಮರಳಿದಾಗ ಕುರುಚಲು ಪೊದೆಗಳ ನಡುವೆ ಮರದ ಗುರುತು ಹತ್ತದೇ ಇದ್ದೀತು. ಮತ್ತೆ ಬೆದಕಿ ನೋಡುವ ದುಸ್ಸಾಹಸದ ನೆರಳಾಗಿ ನಿರಾಶೆ ಇದ್ದರೆ? ಅನಿಶ್ಚಿತತೆಯೋ ಅಲಕ್ಷ್ಯವೋ, ಭರಣಿಯೊಳಗಿರವುದನ್ನು ಸೋಕದೇ ಇರುವುದೇ ಮೇಲೇ?  


 ಅಥವಾ 


ತನ್ನಿರುವಿಕೆಯ ತೋರಲೋ ಎಂಬಂತೆ  ಬಿರಟೆಯ ಬೇಲಿ ಹಾರಿ ಮಣ್ಣಲ್ಲಿ ಬೆರೆತು ಹೋದೀತೇ ಆ ಸೊಗಡು? ಮರವೂ ಹೀರಿ ತನ್ನ ಸುಮಗಳಿಗುಣಿಸೀತೇ! ಅಲ್ಲೆಲ್ಲೋ ತಿಳಿಯದೇ ಹಾದಾಗ, ಪರಿಮಳದ ಗಾಳ ಬೀಸಿ ಸೆಳೆದೀತೇ! ಆಗ, ಆವೇಗದ ದೀರ್ಘೋಚ್ಛ್ವಾಸದ ಎಳೆತಕ್ಕೆ ಅಷ್ಟೂ ಕಂಪು ಬರಿದಾಗಿಬಿಟ್ಟರೆ! 


ಬೇಡ! ಇರಲಿ ಅಲ್ಲೇ! ಘ್ರಾಣಶಕ್ತಿ ಕಂತು, ಮೂಲಾಕರದಿಂದ ಮತ್ತೆ ಚೈತನ್ಯವನ್ನು ತೀವುವ ಘಳಿಗೆಯಲ್ಲಿ, ಭರಣಿಯ ನಿಧಿ ಒದಗಿಬಂದೀತು. 


*****


ಅರೆರೆ! ಇದೇನು! ನಾನು ಹುದುಗಿಸಿಟ್ಟಿದ್ದ ಭರಣಿಯೆಲ್ಲ ಒಮ್ಮೆಲೇ ಖಾಲಿಯಾದಂತಿದೆಯಲ್ಲ! ಹಾ, ವಿಧಿಯೇ! ನನ್ನ ಹಂಬಲಿಕೆಯನ್ನೆಲ್ಲ ಆ ಪುಟ್ಟ ಗೂಡಿನ ಸಲುವಾಗಿ ಬಚ್ಚಿಟ್ಟಿದ್ದೆನಲ್ಲಾ! ಬೇಸರಿಸಿ ದೂರವಾಯಿತೇ? ಮತ್ಯಾವುದೋ ಹಂಬಲಿಕೆಯ ಪಾಶ ಅದನ್ನು ಸೆಳೆದುಬಿಟ್ಟಿತೇ? ಜೀವಂತಿಕೆ ಯನ್ನೆಲ್ಲ ಹೀರಿ ಎಲ್ಲೋ ಅದೃಶ್ಯವಾಗಿಹೋಯಿತಲ್ಲ! ಈಗೇನಿದ್ದರೂ ಬರಿದೆ ಜಡ, ಸೊಗಡಿಲ್ಲ, ಸೊಂಪಿಲ್ಲ  ನಿರಾಶೆಯ ವಿಸ್ತರದ ಬಯಲಿಗೆ ಹತಾಶೆಯ ಬೇಲಿ. ಬಿರು ಬಿಸಿಲಿನ ಮೋಡವಿಲ್ಲದ ನೀಲಿಯಂತೆ ಬರಡು. ಬಣ್ಣದ ಸಂಜೆಗಳ ಸುಳಿವೇ ಇಲ್ಲದ ಕಗ್ಗತ್ತಲು-ಹಗಲುಗಳ ಹೊಯ್ದಾಟ. 


ಇಂತಹ ನಿಸ್ತೇಜ ಇರುಳಿನ ಕನಸಿನಲ್ಲಿ ಎಲ್ಲಿಂದಲೋ ಬಂದ ಮಿಂಚು. ಮೈ ಮನಗಳಲ್ಲಿ ಮೆದುವಾಗಿ ಹೆಜ್ಜೆಯೂರಿದ ದಿವ್ಯತೆಯ ನೆರಳು.  ನವಿರಾಗಿ ತೂರಿ ಬಂದ ಚಿರಪರಿಚಿತ ಸೊಗಡು! ಅದೇ! ಭರಣಿಯೊಳಗಿನ ನಿಧಿ! ಆದರೆ, ಇದೆಂಥ ಹೊಸತನ! ಹಿಂದೆಂದೂ ಕಾಣದ ಅನೂಹ್ಯ ಸಂವೇದನೆಯೊಂದು ಒಡಲಾಳದಿಂದ ಹೊಮ್ಮಿದಂತಿದೆ. ಮತ್ತೆಂದೂ ಬಾರದಂತೆ ಮರೆಯಾಗಿ ಹೋಗಿದ್ದ ನಿಧಿ ಈ ಹೊತ್ತು, ನನ್ನೊಳಗೇ! ಅದಾವ ಮಾಯೆಯಿಂದ ನನಗೇ ತಿಳಿಯದಂತೆ ನನ್ನೊಳಗೆ ಕರಗಿ ಹೋಯಿತೋ! ನನ್ನ ಅಣುಅಣುವನ್ನೂ ತನ್ನ ಕಂಪಲ್ಲಿ ಮೀಯಿಸಿ, ಅವ್ಯಕ್ತ ಭಾವನೆಗಳನ್ನು ತನ್ನ ಆರ್ದ್ರತೆಯಲ್ಲಿ ತೋಯಿಸಿ, ಕ್ಷಣಮಾತ್ರದಲ್ಲಿ ನನ್ನನ್ನೇ ರೂಪಾಂತರಗೊಳಿಸಿತಲ್ಲ! ಈಗ ನಾನು ನಾನೇ ಅಲ್ಲ! ನನ್ನೊಳಗೆ ಸೇರಿ ಹೋದ ಆ ದಿವ್ಯ ನಿಧಿಯ ಅಭಿವ್ಯಕ್ತಿ ನಾನು. ನನ್ನೊಳಗೆ ಬೆಳಗುವ ಆ ಜ್ಯೋತಿಯ ದೀಪ್ತಿ ನಾನು. 


ಅಕ್ಷರಬಾಲೆ

 

ಕೆಲವೊಮ್ಮೆ ಒಂದರಮೇಲೊಂದು ಪದರಗಳನ್ನು ಪೇರಿಸಿಟ್ಟಂತೆ ಮೈಮನಗಳು ಭಾರವೆನಿಸುತ್ತವೆ. ಸಿಹಿಯಾದದ್ದೇನನ್ನೋ ತಿನ್ನುವಾಗ ಎಲ್ಲೋ ಒಗರೋ ಕಹಿಯೋ ಆದ ಕಣವೊಂದರ ರುಚಿ, ಹೇಗೋ ಸಿಕ್ಕಿಬಿಟ್ಟರೆ, ಮನಸ್ಸು ಬಿಡಬೇಕಲ್ಲ! ತಿಂದದ್ದು ಸಿಹಿ ಎಂಬ ನೆನಪೇ ಹೋಗುವಷ್ಟು ' ಏಕಿದು, ಎಲ್ಲಿಂದ ' ಎಂಬ ಪ್ರಶ್ನೆಗಳು ಆವರಿಸತೊಡಗುತ್ತವೆ. ಅಂಥದ್ದೊಂದು ಕ್ಷಣದಲ್ಲಿ ಪುಟ್ಟ ಕೂಸಿನ ಇಂಪಾದ ಮಾತಿನಂತೆ ಒಳದನಿಯೊಂದು ಕೇಳಿಸುತ್ತದೆ. ' ಬಾ, ಆಡೋಣ ' ಎನ್ನುತ್ತಾಳೆ ಪುಟಿವ ಹೆಜ್ಜೆಯ ಮುಗ್ಧ ಬಾಲೆ. ಮತ್ತೆಲ್ಲವನ್ನೂ ಅಲ್ಲೇ ಬಿಟ್ಟು ಅವಳ ಹಿಂದೆ ಹೋಗಿಬಿಡುವುದಾಗುತ್ತದೆ.

ಯಾರೀ ಬಾಲೆ? ಎಲ್ಲಿಯವಳು? ಅವಳು ಬರುತ್ತಿದ್ದಂತೆಯೇ ಅವಳ ನೆಲದ  ಚಿರಪರಿಚಿತ ಸೊಗಡು ಸೆಳೆಯುತ್ತದೆ. ಹಿಂದೆ ಅವಳೊಡನೆ ಕೂಡಿ ನಲಿದ ಘಳಿಗೆಗಳಲ್ಲಿ ಒಂದಷ್ಟು ನನ್ನಲ್ಲಿಯೂ ಬೆರೆತುಹೋಗಿರುವ ಸೊಗಡು, ಅದು ಸೆಳೆಯುತ್ತದೆಯೇ ಮತ್ತೆ ಮತ್ತೆ ಅವಳನ್ನೂ?

ಕಂಡೊಡನೆ ನಸುನಗುತ್ತಾ ಕೈ ಹಿಡಿದು ಎಳೆದೊಯ್ಯುತ್ತಾಳೆ. ಆಡಲು ಜೊತೆ ಬೇಕಿರುವುದು ಅವಳಿಗೋ, ನನಗೋ? ಅಂತೂ ನನ್ನಲ್ಲಿನ ಅವಳು, ಅವಳಲ್ಲಿನ ನಾನು, ಹಮ್ಮಿಲ್ಲದೆ ಗೆಳತಿಯರಾಗಿಬಿಡುತ್ತೇವೆ. ನನಗೇ ಗೊತ್ತಿಲ್ಲದ ದಾರಿ, ತಿರುವುಗಳಲ್ಲಿ, ಎಲ್ಲಿಗೋ ಕುಣಿಯುತ್ತಾ ಸಾಗುತ್ತೇವೆ.

ಧೂಳೆದ್ದ, ಒಣಗಿದ, ಮೋಡವಿರದ ಖಾಲಿ ಬಾನಿನ ಬಿಸಿಲ ಝಳದ ನಗರದ ರಸ್ತೆಯಿಂದ ಗಿರಿಯೊಂದನ್ನು ಸುತ್ತುವರೆದ ಸುರುಳಿ ಸುರುಳಿ ರಸ್ತೆಗಳೆಡೆಗೆ ಕ್ಷಣ ಮಾತ್ರದಲ್ಲಿ ತಲುಪಿಬಿಡುತ್ತೇವೆ!   ಗಿರಿಯನ್ನು ಏರಿದರೆ, ಅತ್ತ ಕಡಲು, ಇತ್ತ ಕಣಿವೆ; ಸಾರ್ಥಕವೆನಿಸುವ ಪಯಣ. ತನ್ನ ನೆಲದ ಹೊಸ ಹೊಸ ವಿಸ್ಮಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ತವಕವಿದ್ದಂತೆ ಉತ್ಸಾಹದಿಂದ ಪುಟಿಯುತ್ತಲೇ ಸಾಗುತ್ತಾಳೆ! ನಾನು ಕಣ್ಣರಳಿಸಿದರೆ  ದಾರಿಯುದ್ದಕ್ಕೂ ಹೆಮ್ಮೆಯಿಂದ ಬೀಗುತ್ತಾಳೆ!


ಅಲ್ಲೆಲ್ಲೋ ಒಂದು ಸುಂದರ ಹೂದೋಟ. ಅದರೊಳಗೆಲ್ಲೋ ಪವಿತ್ರ ಮಡುವಿನ ನಡುವಿನಲ್ಲಿ ಮಂದಿರವೊಂದಿದ್ದೀತು. ಅಲ್ಲಿಂದ ಹೊರಟ ಅಸಂಖ್ಯ ದನಿಗಳ ಘೋಷ ಇಲ್ಲಿನ ಗಾಳಿಯಲ್ಲೆಲ್ಲಾ ಪಸರಿಸಿದಂತಿದೆ. ಒಂದೊಂದು ಎಲೆಗೂ ಅದರದೇ ಲೇಪ! 


ಒಂದಿಷ್ಟು ಹೂವು, ಎಲೆ, ಕಡ್ಡಿ, ಮಣ್ಣು ಸೇರಿಸಿ ನಮ್ಮದೇ ಒಂದು ಪುಟ್ಟ ಲೋಕ ಸೃಷ್ಟಿಸುತ್ತೇವೆ. ಸಣ್ಣ ಸಣ್ಣ ಕಲ್ಲುಗಳನ್ನು ಅದರ ಸುತ್ತಲೂ ಜೋಡಿಸಿಟ್ಟರೆ ನಮ್ಮ ಲೋಕದ ಸೀಮೆ. ಸೀಮೆಯಾಚೆಯಿಂದ ಮಣ್ಣು ಬಗೆದು, ನಾಲೆ ಮಾಡಿ, ಅಲ್ಲೇ ಹರಿವ ಪುಟ್ಟ ತೊರೆಯಿಂದ ನಮ್ಮ ಲೋಕದೊಳಗೆ ನೀರು ಹಾಯಿಸುವುದು! ಸೃಷ್ಟಿ ಎಂಬುದು ಸೃಷ್ಟಿಕರ್ತನ ಸ್ವತ್ತು ಮಾತ್ರವೇ!? ನಾವೂ ಸೃಷ್ಟಿಸಬಹುದಲ್ಲಾ!


ಇನ್ನೂ ಎಷ್ಟೆಷ್ಟೋ ಬಗೆಯ ಹೂವು,ಎಲೆ , ಕಲ್ಲುಗಳನ್ನು ತಂದು  ಜೋಡಿಸಿ ವಿಸ್ತರಿಸಿ ನಲಿಯುವುದು ಒಮ್ಮೊಮ್ಮೆ. ಇಲದಿದ್ದರೆ ಹಾಗೇ ಸುಮ್ಮನಿದ್ದು ಹರಿವ ನೀರ ಜುಳುಜುಳುವಿನಲ್ಲಿ ಕಳೆದುಹೋಗುವುದು. ಹೀಗೆ ಮನಸ್ಸು ಹಿಡಿಯುವಷ್ಟು ಸೊಗಸನ್ನು ತುಂಬಿಕೊಂಡು ಅಲ್ಲಿಂದ ತೆರಳುವುದು.  ಬಂದು ಹೋಗುವಾಗಲೆಲ್ಲ ಇದೇ ಭಾವನೆ. ಅಲ್ಲಿಂದ ಮರಳಿದಾಗ ಮತ್ತೆ ಪದರಗಳ ಹೇರುವಿಕೆ. ಇರಲಿ, ಪದರಪದರಗಳನ್ನು ಆಗಾಗ ಕಳಚಿಬಿಡುವ

ಅವಕಾಶಗಳು ಹೀಗೇ ಬರುತ್ತಿರಲಿ. ಹೋದಹೋದಂತೆಲ್ಲ ಮೈಮನ ಹಗುರಾಗಲಿ. ಆಗ, ನನ್ನನ್ನು ಇನ್ನೂ ಮುಂದೆ, ಆ ಮಡುವಿನ ನಡುವಿಗೂ ಕರೆದುಕೊಂಡು ಹೋಗಿಯಾಳೇ ಅಕ್ಷರಬಾಲೆ?


ಪ್ರತೀಕ್ಷೆ

 ಎಂದಿನಂತೆ ಸಂಜೆಯ ವೇಳೆಗೆ,  ತೂರಿ ಬಂದ ಧೂಳು- ಕಸವನ್ನೆಲ್ಲ ಗುಡಿಸಿದ್ದಾಯಿತು. ಬತ್ತದ ಬಾವಿಯೊಂದಿದೆಯಲ್ಲ, ಮೂಲೆಯಲ್ಲಿ? ನೀರು ಸೇದುವ ಪ್ರಯಾಸಕ್ಕೆ ಫಲವಾಗಿ ಪ್ರಾಕಾರವೆಲ್ಲ ಶುಭ್ರ. ಮುಂಬರುವ ದಿವ್ಯಾನುಭವದ ಮುನ್ಸೂಚನೆಯಂತೆ ಮಣ್ಣಿಗೆ ನೀರು ಸೋಕಿ ಬೀರಿದ ಕಂಪು. ಬಾಗಿಲ ಮುಂದೆ ಅಷ್ಟೋ ಇಷ್ಟೋ ತಿಳಿದಷ್ಟು ಚುಕ್ಕಿಗಳನ್ನಿರಿಸಿ ಬಿಳಿಯ ಗೆರೆಗಳಿಂದ ಅವುಗಳನ್ನು ಒಂದಕ್ಕೊಂದು ಬೆಸೆದ ಮೇಲೆ, ನಾನೆಳೆದ ರೇಖೆಗಳೊಳಗೆ ಕಳೆದುಹೋದ ಚುಕ್ಕಿಗಳು ಚುಕ್ಕಿಗಳಾಗಿ ಉಳಿಯಲೇ ಇಲ್ಲ. ಎಲ್ಲೋ ಅಡ್ಡಾದಿಡ್ಡಿ ಎಳೆದ ಗೆರೆಯೊಂದು ಅಣಕಿಸಿತಾದರೂ.  ' ಒಟ್ಟಾರೆ ಚೆನ್ನಿದೆ ' ಎಂಬ ಸಮಾಧಾನ. ಇಷ್ಟೆಲ್ಲಾ ತಯಾರಿ ಏಕೆ? ಕತ್ತಲಲ್ಲಿ ಬರುವ ಅತಿಥಿಗೆ. ಪೂರ್ಣ ಕತ್ತಲಾದರೆ ಬರುವ ಅತಿಥಿಗೆ ಸಲ್ಲ. ಸಣ್ಣ ಸೊಡರಿನ ಬೆಳಕಿರಬೇಕು. ಒಂದಲ್ಲ, ಹತ್ತಾರು ಸೊಡರುಗಳು. ಬತ್ತಿ ಹೊಸೆದು, ಎಣ್ಣೆ ಎರೆವ ತಯಾರಿಯಲ್ಲಿ ಏನೋ ಒಂದು ಧನ್ಯತೆ. ಒಳಗೆ ಸಾಲಾಗಿ ಜೋಡಿಸಿ ಮೊದಲ ಸೊಡರನ್ನು ಬೆಳಗಿಸುವ ವೇಳೆಗೆ ಬೆಳಕಿಗೆ ಸ್ವಾಗತ ಕೋರಲು ಆವರಿಸಿದ ಕತ್ತಲು. ಪ್ರಜ್ವಲನಕ್ಕೆ ಸಿದ್ಧವಾಗಿ ಹಾತೊರೆಯುತ್ತಾ ತುಸುವೇ ಕತ್ತು ಚಾಚಿ ಕುಳಿತ ಬತ್ತಿ ಹೊತ್ತ ಕ್ಷಣದ ದಿವ್ಯತೆಯ ಮೂರ್ತರೂಪವಾಗಿ ಸುತ್ತ ಹೊಮ್ಮಿದ ನವಿರು ಪ್ರಭೆ. ಒಂದರಿಂದಿನ್ನೊಂದು ದೀಪವನ್ನು ಬೆಳಗುವಾಗ ಆ ಭವ್ಯಾನುಭೂತಿಯ ಗುಣಾಕಾರ. 

ಎಲ್ಲ ದೀಪಗಳನ್ನು ಬೆಳಗಿಸಿ ಹಿಂದೆ ಸರಿದು ನಿಂತು ನೋಡುವಾಗ, ಶ್ರುತಿಹಿಡಿದು ಸ್ವರವೊಂದನ್ನು ಒಕ್ಕೊರಲಿನಿಂದ ಹಾಡುತ್ತಿರುವ ಸಂಗೀತ ಶಾಲೆಯ ಮಕ್ಕಳಂತೆ ತೋರುವ  ನಿಸ್ವಾರ್ಥ, ನಿಷ್ಕಾಮ ಸೊಡರುಗಳ ಬೆಳಕಿನೋಕುಳಿ. ಈ ಸಂತೃಪ್ತಿಯಲ್ಲೂ, ಇನ್ನಾವುದರದೋ ಬರುವಿಕೆಗಾಗಿ ಕಾಯುವ ಮನಸ್ಸಿಗೆ ಈ ಪ್ರತೀಕ್ಷೆ ನಿರಂತರವಾಗಿರಲೆಂಬ ಹಂಬಲ.


ಮಲ್ಲಿಗೆ

 

' ಮಿಸ್ ನಮ್ಮನೇಲಿ ಬಿಟ್ಟಿದ್ದು, ಅಮ್ಮ ಕಟ್ಟಿದ್ದು ' ಎನ್ನುತ್ತಾ ಬಂದ ಪುಟ್ಟ ಕೈಗಳಿಂದ ಚೆಲ್ಲಿ ಹೋಗಿದ್ದ,


' ನಾಳೆ ನನ್ ಫ್ರೆಂಡ್ಸ್ ಥರ ಹೇರ್ಸ್ಟೈಲ್ ಮಾಡ್ಸು, ಇಲ್ಲಾಂದ್ರೆ ನಂಗೆ ಇದೆಲ್ಲ ಬೇಡ ' ಎಂದು ಮೂಗು ಮುರಿದ ಉದ್ದ ಜಡೆಯನ್ನು ಬಳಸಿದ್ದ,


ಮದುವೆಯಾದ ಹೊಸದರಲ್ಲಿ ಆತ್ತೆಯವರು, ' ಬಾ, ನಾನು ಕೂದಲಿಂದ ಬಿಡಿಸ್ತೀನಿ ' ಎನ್ನುವಾಗ ಸಂಕೋಚದಿಂದ ಮುದುರಿಹೋಗಿದ್ದ, 


ಅಮ್ಮನ ಮನೆಯಿಂದ ತಂದು ನೆಟ್ಟ ಬಳ್ಳಿಯ ಸೊಬಗು ನಿತ್ಯವೂ ಮನೆದೇವರ ಪಟವನ್ನು ಅಲಂಕರಿಸಿದ್ದ,


ಮಲ್ಲಿಗೆಯ ಕಂಪು ಇನ್ನಿಲ್ಲ.


ಈಗ, ಛಾಯಾಚಿತ್ರಕ್ಕೆ ಎಂದೂ ಬಾಡದ, ಕಂಪಿಲ್ಲದ, ಪೇಪರ್ ಮಲ್ಲಿಗೆಯ ಮಾಲೆ.

ತಾಯಿ

 

ಇದ್ದಳೊಬ್ಬಳು ಮಗುವಿಲ್ಲದ ತಾಯಿ. ಒಮ್ಮೆ ಅವಳಿಗೊಂದು ಕನಸಾಯಿತು. ಬಟಾಬಯಲು; ಹಸುಗೂಸಿನ ಹಸಿವಿನ ಆರ್ತನಾದ ಕಿವಿಗಳಿಗೆ ಕೇಳಿಸಿದೆ; ಮಗುವೆಲ್ಲಿ? ಮಗುವಿಲ್ಲ, ಮಗುವಿನಾಕಾರದ ನೆರಳಷ್ಟೇ. ಎತ್ತಿಕೊಂಡು ಸಮಾಧಾನ ಮಾಡೋಣವೆಂದರೆ ಅದು ಅಮೂರ್ತ, ಅರೂಪ. ಆ ಕನಸಿನೊಳಗೆ ಅವಳಲ್ಲೊಂದು ಅವೇದ್ಯ ಮಮಕಾರ ಮೊಳೆಯಿತು. ಎಚ್ಚರವಾಗುವ ಹೊತ್ತಿಗೆ ಅದು ಹೆಮ್ಮರವಾಗಿತ್ತು. ಉಕ್ಕುವ ಆ ಮಾತೃತ್ವದ ಹರಿವಿಗೆ ಪಾತ್ರವೊಂದು ಬೇಕಲ್ಲ?! ನಾಲ್ಕಾರು ಸಸಿಗಳನ್ನು ನೆಟ್ಟಳು. ಉಣಿಸಿದಷ್ಟೂ ತುಂಬಿ ತುಂಬಿ ಬಂದ ವಾತ್ಸಲ್ಯವನ್ನು ಹತ್ತಾರು, ನೂರಾರು ಸಸಿಗಳಿಗೆ ಎರೆದಳು; ಪೊರೆದಳು. ಸಸಿಗಳು ಮರವಾಗಿ ಮೆರೆದಾಗ ಅವಳ ಪೋಷಣೆ ಸಾಕಾರ, ವಾತ್ಸಲ್ಯ ಸಾಕ್ಷಾತ್ಕಾರ. ಬಯಲುಕೂಸಿನ ಕನಸು ಮರಳಿತ್ತು. ಈ ಬಾರಿ ಬಯಲಿನಲ್ಲೆಲ್ಲೆಲ್ಲೂ ಎತ್ತರದ ಮರಗಳು. ಅದರ ನಟ್ಟನಡುವೆ ನಿಂತ ಅವಳು ಆ ಮರಗಳೊಳಗೆ  ಮೆಲ್ಲನೆ ಕರಗಿದ್ದಳು. ಅವಳ ಕೈಗಳೇ ಈಗ ಆ ಮರದ ರೆಂಬೆಗಳು; ಮಡಿಲೇ ಕಾಂಡ; ಸೆರಗೇ ಹಸಿರೆಲೆಗಳ ಹಾಸು. ತನ್ನ ಅತಿಮಾನುಷ ಕೈಗಳಿಂದ ಅಳುತ್ತಿದ್ದ ಹಸುಗೂಸನ್ನು ಮಡಿಲಿಗೆತ್ತಿಕೊಂಡಳು. ಸೆರಗ ಮರೆಯಲ್ಲಿ ಅಳುವು ನಿಂತಿತ್ತು. ಆ ಅಮೂರ್ತ, ಅರೂಪ ಕೂಸಿನ ಹಸಿವು ತಣಿದಿತ್ತು.

ಪುಟ್ಟಿ

 

ಎಲ್ಲ ಅಮ್ಮ ಹೇಳಿದ ಕಥೆಯಲ್ಲಿದ್ದಂತೆಯೇ ಇತ್ತು. ದೊಡ್ಡ ಮರದ ರೆಂಬೆಯ ತುಂಬ ಪುಟ್ಟ ಪುಟ್ಟ ಹಸಿರು ಚಿಗುರೆಲೆಗಳು. ಬಾನು ಆತುರಾತುರವಾಗಿ ಅಷ್ಟೋ ಇಷ್ಟೋ ಉಳಿದ ಬೆಳಕನ್ನು ತನ್ನ ಅಂಗಳದಿಂದ ಭೂಮಿಗೆ ಮೊಗೆದು ಮೊಗೆದು ಸುರಿಯುತ್ತಿತ್ತು. ಚಿಗುರೆಲೆಗಳು ಆ ಹೊಂಬೆಳಕ ಹೊನಲಿನಲ್ಲಿ ಮುಳುಗೇಳುತ್ತಾ ತಮ್ಮಷ್ಟಕ್ಕೆ ತಾವೇ ನಗುತ್ತಿದ್ದವು. ಪುಟ್ಟಿ ತನ್ನ ನೆಚ್ಚಿನ ಗುಲಾಬಿ ಬಣ್ಣದ ಲಂಗ ತೊಟ್ಟಿದ್ದಳು. ತೆಳುವಾದ ನುಣುಪಾದ ಬಟ್ಟೆ, ಅಲ್ಲಲ್ಲಿ ಪುಟ್ಟ ಪುಟ್ಟ ಬೆಳ್ಳಿ ನಕ್ಷತ್ರಗಳು. ತನ್ನ ಪುಟ್ಟ ಕೈಗಳಲ್ಲಿ ಲಂಗದ ಅಂಚನ್ನು ಹಿಡಿದು ‘ಒಂದು ಎರಡು ಮೂರು’ ಎಂದು ನಿಂತಲ್ಲೇ ತಿರುಗಿದಳು. ಹಾಗೆ ತಿರುಗುವಾಗ ಒಂದು ನಕ್ಷತ್ರ ಅವಳ ಲಂಗದಿಂದ ಹಾರಿ ಹೋಗಿ ಬಾನಿಗೆ ನಾಟಿತು. ಅದೇ ಅವತ್ತಿನ ಬಾನಲ್ಲಿ ಕಂಡ ಮೊದಲ ನಕ್ಷತ್ರ. ಅವಳ ಗುಲಾಬಿ ಲಂಗ ದೊಡ್ಡ ಛತ್ರಿಯಂತೆ ಬಿಚ್ಚಿಕೊಂಡು ಅವಳು ಥಟ್ಟನೆ ಕೂತಾಗ ಧೊಪ್ಪೆಂದು ನೆಲದ ಮೇಲೆ ಗುಂಡಗೆ ಹರಡಿಕೊಂಡಿತು - ಸುತ್ತ ಬೆಳ್ಳಿ ನಕ್ಷತ್ರಗಳು, ಮಧ್ಯದಲ್ಲಿ ಪುಟ್ಟಿ. 

 

ಈ ವಿಸ್ಮಯ ಲೋಕದಲ್ಲಿ ಸೋಪಿನ ಗುಳ್ಳೆಗಳನ್ನು ಊದದಿದ್ದರೆ  ಹೇಗೆ?  ಪುಟ್ಟಿ ತನ್ನ ಕೈಗಳನ್ನು ಒಂದಕ್ಕೊಂದು ಉಜ್ಜಿ ಉಫ್ ಎಂದು ಊದಿದಳು. ಪುಟ್ಟ ಗುಳ್ಳೆಯೊಂದು ಹೊಮ್ಮಿ ಬಂದಿತು. ಬಂದದ್ದೇ ಮೇಲೆ ಹಾರುತ್ತಾ ಆ ಬೆಳ್ಳಿ ನಕ್ಷತ್ರದ ಪಕ್ಕ ಹೋಗಿ ನಿಂತಿತು. ಮತ್ತೊಂದು ಗುಳ್ಳೆ ಊದಿದಳು , ಮುಂಚಿನದ್ದ್ದಕ್ಕಿಂತ ದೊಡ್ಡದು.  ಅದರೊಳಗೆ ಪುಟ್ಟಿಯದ್ದೇ ಪ್ರತಿರೂಪ. ಅದೂ  ಹೋಗಿ  ನಕ್ಷತ್ರದ ಪಕ್ಕದ ಗುಳ್ಳೆಯಲ್ಲಿ ಸೇರಿಕೊಂಡಿತು. ಗುಳ್ಳೆಯ ಹಿಂದೆ ಗುಳ್ಳೆ, ಒಂದೊಂದು ಗುಳ್ಳೆಯೊಳಗೂ ಪುಟ್ಟಿ.  ಒಂದೊಂದು ಗುಳ್ಳೆ ಊದುವಾಗಲೂ ಪುಟ್ಟಿಯ ಆಕಾರ ಕ್ಷೀಣವಾಗುತ್ತಿತ್ತು, ಅದು ಹೋಗಿ  ನಕ್ಷತ್ರದ ಪಕ್ಕದ ಗುಳ್ಳೆಯೊಳಗೆ ಲೀನವಾದಾಗ ಅದರೊಳಗಿನ ಪುಟ್ಟಿಯ ಆಕಾರ ದೊಡ್ಡದಾಗುತ್ತಿತ್ತು. ಗುಳ್ಳೆಯೊಳಗಿರುವ ಪುಟ್ಟಿ, ಗುಳ್ಳೆ ಊದುವ  ಪುಟ್ಟಿ - ಒಬ್ಬರನ್ನೊಬ್ಬರು  ನೋಡಿ ಹಿಗ್ಗುತ್ತಿದ್ದರು .


ಪುಟ್ಟಿ ಈಗ ಇಷ್ಟೇ ಚೋಟುದ್ದ. ಒಮ್ಮೆ ದೀರ್ಘವಾಗಿ ಉಸಿರೆಳೆದು ಊದಿದಳು - ಉಫ್........

ಕೊನೆಯ ಗುಳ್ಳೆಯೊಳಗೆ ಉಳಿದಷ್ಟೂ ಪುಟ್ಟಿಯ ಆಕಾರ ಹೊಕ್ಕು ನಕ್ಷತ್ರದ ಪಕ್ಕದ ದೊಡ್ಡ ಗುಳ್ಳೆಯೊಳಗೆ ಸೇರಿಹೋಯಿತು. ಅಷ್ಟು ಹೊತ್ತಿಗೆ ಬೆಳ್ಳಿ ನಕ್ಷತ್ರದ ಅಕ್ಕ ಪಕ್ಕ ಸುತ್ತಮುತ್ತ ಫಳಫಳನೆ ನಕ್ಷತ್ರಗಳು ಹೊಳೆಯಲಾರಂಭಿಸಿದ್ದವು. ಎಲ್ಲಿಂದಲೋ ಬೀಸಿದ ಗಾಳಿ ಆ ನಕ್ಷತ್ರಗಳ ಹಾದಿಯಲ್ಲಿ ಪುಟ್ಟಿ ಇದ್ದ  ನೀರ್ಗುಳ್ಳೆಯನ್ನು ಇನ್ನೆಲ್ಲಿಗೋ ಹೊತ್ತೊಯ್ಯಿತು.


*****


ಪುಟ್ಟಿ ಬಿಡಿಸಿ ಬಣ್ಣ ತುಂಬಿದ್ದ ಚಿತ್ರವೊಂದು ಮೇಜಿನ ಮೇಲಿದೆ.  ಪುಟ್ಟ ಮನಸ್ಸು ಲೌಕಿಕದ ಪರಿಧಿಯ ಸುತ್ತ ಅಲೋಕಾಯಾನದಲ್ಲಿ ಸುತ್ತಾಡಿ ಬಂದ ಕುರುಹುಗಳು ಅದರಲ್ಲಿ ತುಂಬಿವೆ. ಸಂಜೆಯ ಬಣ್ಣ ಕತ್ತಲಲ್ಲಿ ಕರಗುವ ಹೊತ್ತಿನಲ್ಲಿ ಚಿತ್ರದೊಳಗಿರುವ ಬೆಳ್ಳಿ ನಕ್ಷತ್ರಗಳು ಕೋಣೆಯೊಳಗೆ ಅವೇದ್ಯ ವಿಸ್ಮಯವನ್ನು ಹರಡುತ್ತಿವೆ, ಪುಟ್ಟಿ ಮತ್ತೆ ಬಂದಳೋ ಎನ್ನುವಂತೆ. ಈ ಭಾವಸಾಂದ್ರತೆ ಅವಳ ಇರುವಿಕೆಯದ್ದೋ ಇಲ್ಲದಿರುವಿಕೆಯದ್ದೋ?


  

ನನ್ನ ನಲವಿನ ಬಳ್ಳಿ

 

My delight's tender vine

Sways in abundant glee

O world, do spare its blooms

Don't siphon them like a bee


Life, a savage, tumultuous cruise

Through woes, my way I make

Let me relish this passing dream

Blend in not throbbing ache


Forever has my pining sought

This moment, its mirth to bring

My heart , a hundred buds does sprout

Revelling in sprightly spring   


Unbounded , I rejoice in zest

In today's euphoric burst

Be not the bird that nips

Desire's fragile spurts 


A stone hurled in air, I rise

I linger in a fragrant spree

To drown again in torment's muck

For now, just set me free


Original by KS Nisaar Ahmed

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ -
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

                                          

Friday, November 12, 2021

Death

 

ಕಾಯಲಾರದಾಗ ನನ್ನ ಕಾಯ ಕಾಲನನ್ನು

ಕಾಲ ತಾನೆ ನಿಂತು ಕಾದ ನನ್ನ ಕಾಲವನ್ನು

"ಹತ್ತು" ಎಂದ ಹೊತ್ತು ನಮ್ಮ ಬಂಡಿ ಸಾಗಲಿತ್ತು

ಮೃತ್ಯು ಮರ್ತ್ಯ ಅಮೃತತ್ವ ಇಷ್ಟು ಮಾತ್ರ ಹೊತ್ತು


ಕೇಳಿ ಬರುತಲಿತ್ತು ಗೊರಸ ತಾಳ ಮೆಲ್ಲ ಮೆಲ್ಲ

ಸಾವಕಾಶವಾದಿ ಕಾಲ ವೇಗವೇನು ಬಲ್ಲ

ವಿನಯಶೀಲ ಅವನ ನಡೆಯ ಮೆಚ್ಚಿ ನನ್ನದೆಲ್ಲ

ದುಡಿಮೆ ವಿಶ್ರಾಂತಿಗಳನೆ ಬಿಟ್ಟುಬಿಟ್ಟೆನಲ್ಲ


ಬಿಡುವ ವೇಳೆಯಲ್ಲು ರಂಗದಲ್ಲಿ ಹೆಣಗುತಿರುವ

ಮಕ್ಕಳಿರುವ ಶಾಲೆಯನ್ನು ಹಾದು ಮುಂದೆ ಬರುವ 

ನಿರ್ವಿಕಾರ ನೋಟ ಬೀರುತಿರುವ ಹೊಲದ ತೆನೆಯ 

ನೋಡಿ ಸಾಗುತಿದ್ದೆವಸ್ತಮಾನಕಾಲ ರವಿಯ


ಇಲ್ಲ! ರವಿಯೆ  ಹಾದುಹೋದನೇನೋ ನಿಂತ ನಮ್ಮ!

ನಾನು ಹೊದ್ದ ರೇಷ್ಮೆ ವಸ್ತ್ರ ತೆಳುವ ಹೊದಿಕೆ ನೆಮ್ಮ,

ಕತ್ತ ಸುತ್ತಿದಾ ರುಮಾಲ ಕಾಪ, ಸೀಳುತಿತ್ತು

ಮಂಜ ಹನಿಯ ಶೈತ್ಯ ಒಡಲ ಹೊಕ್ಕು ನಡುಗಿಸಿತ್ತು


ತಂಗುದಾಣದಲ್ಲಿ ಪಯಣ ತಂಗಿದಾಗ ಕೊಂಚ

ಕಂಡೆ ನೆಲದ ಹಣೆಗೆ ಬೋರೆಯಂತೆ ಎದ್ದ ಚೊಂಚ

ಮನೆಯದಂತೆ ಇತ್ತು ಕವುಚಿದಂತೆ ಮಣ್ಣ ಮರಿಗೆ

ಸೂರು ಎಲ್ಲೋ ಕಂಡೂ ಕಾಣದಂತೆ ಹುದುಗಿ ಒಳಗೆ


ಕಾಲಮಾನವೆಷ್ಟೋ ಕಳೆದು ಅಂದಿನಿಂದ ಇಂದು

ಘಳಿಗೆಯಂತೆ ನೂರೋ ಹೆಚ್ಚೋ ವರುಷ ತೋರುತಿಹುದು 

ನಮ್ಮ ಪಯಣವೆತ್ತವೆಂಬ ಶಂಕೆಗಿರುವ ಗಾಹು

ತೋರಿತಶ್ವಮುಖವನಂತದೆಡೆಗೆ ಎಂಬ ಹೊಳಹು


Original by Emily Dickinson


Because I could not stop for Death –

He kindly stopped for me –

The Carriage held but just Ourselves –

And Immortality.


We slowly drove – He knew no haste

And I had put away

My labor and my leisure too,

For His Civility –


We passed the School, where Children strove

At Recess – in the Ring –

We passed the Fields of Gazing Grain –

We passed the Setting Sun –


Or rather – He passed Us –

The Dews drew quivering and Chill –

For only Gossamer, my Gown –

My Tippet – only Tulle –


We paused before a House that seemed

A Swelling of the Ground –

The Roof was scarcely visible –

The Cornice – in the Ground –


Since then – 'tis Centuries – and yet

Feels shorter than the Day

I first surmised the Horses' Heads

Were toward Eternity –

Thoughts by The Mother

 


ಜ್ವಾಲೆಯೊಂದುರಿವಂತೆ ಮೌನದಲಿ ಧ್ಯಾನದಲಿ

ಚಾಂಚಲ್ಯವಿರದೆ ಘಮ ಮೇಲೇರುವಂತೆ

ಧಾವಿಸುತ್ತಿದೆಯಿದೋ ನಿನ್ನೆಡೆಗೆ ನನ್ನೊಲವು

ನಿರ್ಭೀತ ನಿಸ್ವಾರ್ಥ ಮುಗ್ಧ ಮಗುವಂತೆ


ನನ್ನಚಲ ನಿಲುವಿಗಿದೆ ವಿಶ್ವಾಸದಡಿಗಲ್ಲು

ನಿಶ್ಚಿತವು ನಿನ್ನ ಸಂಕಲ್ಪಸಾಕಾರ

ನಿನ್ನ ದಿವ್ಯಜ್ಯೋತಿಗಿದೆ ಮೂರ್ತತೆಯ ಸಿದ್ಧಿ

ಮೈದುಂಬಿ ಹರಿಯಲಿದೆ ನೆಮ್ಮದಿಯ ಪೂರ


ಜಗವನಾವರಿಸಲಿದೆ  ಅನುರಕ್ತಿರಸ ಧಾರೆ

ನನ್ನನೇ ನಿನ್ನೊಳಾಗಿಸುವಂಥ ಬೆಸುಗೆ

ನಿನ್ನೀ ಕೃಪಾ ಜಲಧಿಯಾಳವನು ನಾ ಸೇರೆ

ಭಿನ್ನತೆಯ ಕುರುಹಿರದ ಸಾಂಗತ್ಯದೊಸಗೆ


ಬರದೇನು ವರವಾಗಿ ನನಗೊಮ್ಮೆ ಆ ಘಳಿಗೆ

ಆಮರ್ಷರಹಿತ ನಿಜ ನನ್ನೀ ಪ್ರತೀಕ್ಷೆ

ಅಮಿತಾಂಬುಧಿಗೆ ಹರಿವ ವಿಶ್ರಾಂತ ಸೆಲೆಯಲ್ಲಿ

ಇರದಿಹುದೆ ಅಸ್ಖಲಿತ ಸಮ್ಮೋಹದೀಕ್ಷೆ


ನನ್ನೊಳಗೆ ನೆಲೆ ನಿಲ್ಲು ನೀನೆ ಚಿರ ಶಾಂತಿ

ಎಲ್ಲ ನೀನೇ ಕಳೆದು ಲೋಕ ವಿಭ್ರಾಂತಿ


Original by InevitableWord - Prayers and Meditations of The Mother

Tears


ನಾನವತರಿಸಿದಾಗ ಭವ್ಯ ಜಗದಾಳ್ಕೆಯಲಿ

ಆಗಮನವನು ಸಾರಿದುತ್ಸಾಹಿ ನೀನೇ

ವಿಸ್ತರಗಳಾಚೆಗಿನ ಕೂಪದಿಂದೊಸರಿರುವ

ಭವ ಚಕ್ರದ ಸ್ನೇಹಿ ನೀ ನಲ್ಮೆ ತಾನೆ?


ಪ್ರಚ್ಛನ್ನ ನಡಿಗೆಯಲಿ ನೀನಾದೆ ಸಹಚಾರಿ

ಅವತೀರ್ಣದನುಭವಕೆ ಸೋಗಿನಂತಾದೆ

ಭಾವಾತಿಶಯದಂಚಿನಲ್ಲು ನಿನ್ನ ಸ್ಫುರಣ

ನಾನರಿಯೆ ನಿನ್ನಾದಿ, ಹೇಳು ಹೇಗಾದೆ?


ಮನದಾಶ್ಮ ಕರಗಿರಲು ಒಡನಾಡಿ ನನಗಾದೆ

ಮೌನದಲಿ ಅವ್ಯಕ್ತದೇರುದನಿಯಾದೆ

ಕಾಲದೋಘದಿ ನಿನ್ನ ದಾಸ್ಯದನಿವಾರ್ಯತೆಗೆ

ಕೊನೆಯೆಲ್ಲಿ, ಅನುದಿನವು ಭಗ್ನ ನಾನಾದೆ


ಕರ್ತಾರನೆದುರಾಗುವಾ ದಿವ್ಯ ಘಳಿಗೆಯಲಿ

ಉಜ್ವಲ ಪ್ರೇಮ ಭವ್ಯಾನುಭವವಿರಲು

ಬಾ ಗೆಳೆಯ ಒಮ್ಮೆ ನಲಿಯುವ ಕೂಡಿ ನಾವೀಗ

ನನ್ನಾತ್ಮಗೀತಕ್ಕಿದೇ ಕೊನೆಯ ಸಾಲು



 Original by thedrunkwriter


You were there when I transcended into this dominion

For you were the one to announce the arrival

You escaped from the smallest wells, beyond those strands

For you are the friend of the human cycle

 

You were my companion, when I strutted the streets

Fall I may from heights, you were my guise

You were there during the cosmic extension

Wonder I always, how do you arise

 

You were my bestie, when the stone melted away

Dumb as I was, you shouted loudest the unspoken

Became your slave, for the time was not my friend

Your other friend ensured, I stayed broken


You became my expression of love, when I saw him

My maker, the love, the grandeur, the glory

Come my friend, let's do one last dance together

For I am done, this is the end of my story

Could it be

 ನಕ್ಷತ್ರ ಧೂಳಿಕಣಗಳು ತಾನೆ ನಾವೆಲ್ಲ

ಗತಕಾಲದೊಂದಾವುದೋ ಹೊತ್ತಿನಲ್ಲಿ

ಪ್ರೇಮಾಂಕುರಾಕಾಂಕ್ಷೆದೀಪ್ತ ಕಣಗಣ ಸುತ್ತಿ

ನಾನೆಂಬ ಅಣುವಿನಾಕೃಷ್ಟ ಪರಿಧಿಯಲಿ


ನಿನ್ನ ಕಣಗಳನರಸಿ ನೇಹ ಬೆಸೆಯುತ ಬಯಸಿ

ಪ್ರೀತಿಸುತ ವರಿಸಿ ಒಂದಾಗಿದ್ದೆವೇನೋ

ಬಿಡದೊಂದು ಬಂಧದಲಿ ಸೆರೆಯಾಗಿ ಸ್ಥಿರವಾಗಿ

ಚಿರವಾಗಿ ನೀರಹನಿಯಾಗಿದ್ದೆವೇನೋ


ನಾನೊಮ್ಮೆ ನಿನಗೆಂದು ಬರೆದೊಂದು ಕವಿತೆಯನು

ಜತನದಲಿ ಮುಚ್ಚಿಟ್ಟು ಮಳೆಹನಿಯೊಳಿರಿಸಿ

ಶುಕ್ಲ ಪದಗುಚ್ಛದಲಿ ಸಂಚರಿಸಿ ಬೆಳಕದನು

ಬಿಡಿಸುತ್ತ ವಿಸ್ತರಿಸಿ ಬಣ್ಣಗಳ ಸೃಜಿಸಿ


ಒಂದೊಂದು ಬಣ್ಣದೆಳೆ ಹಿಗ್ಗುತ್ತ ಬಾಗುತ್ತ

ಅಂದು ನಿನ್ನನು ಸೆಳೆದ ಸವಿಯಾಯಿತೇನೋ

ಆ ವರ್ಣಮಯ ವಿಸ್ಮಯಾನುಭವದ ಸ್ಮೃತಿಯೇ

ಇಂದಿಲ್ಲಿ ಬಾನ ಮಳೆಬಿಲ್ಲಾಯಿತೇನೋ


ಹೀಗಿರಲುಬಹುದೇ? ಈ ವಿಶ್ವವೈಶಾಲ್ಯದಲಿ

ನಾನು ನೀನಷ್ಟೆ ಇನ್ನೇನಿಲ್ಲ ಶೂನ್ಯ

ಒಂದನಿನ್ನೊಂದು ನಮ್ಮೆರಡು ಕೈ ಕೂಡಿದರೆ

ಚಪ್ಪಾಳೆ ದನಿಗೆ ಬೇರೇನಿಲ್ಲ ಗಣ್ಯ


ಒಳಸೆಳೆವ ಸುಳಿಯೊಳಗೆ ಆಕಾಶಕಾಯಗಳು

ಧುಮ್ಮಿಕ್ಕಿ ಅಪ್ಪಳಿಸುವಂತಿಹೆವೆ ನಾವು?

ನಾ ಬಿರಿದು ನೀ ನನ್ನೊಳಿಳಿದು ನೀರವ ಸಿಡಿದು

ನಾದವೇ ಹೊಮ್ಮಿದ್ದು ಇರಬಹುದೆ ನಿಜವು?


Original by Hemanth Shanthigrama

Could it be that
Since we are all made of stardust,
Somewhere in the distant past
my valence electrons befriended yours,
Fell in love, and bonded forever
forming water.

Could it be that
the rainbow in the sky is just a memory
of a poem that I had once written for you
and kept safely locked in a raindrop,
and light scattering the words I wove,
forming colours

Could it be that
it is just you and me that make up the universe
like the two palms to a clap! we collide
like two planets trapped in a gravitational vortex
To take you in, my soul breaks, shattering the silence
forming music



Thursday, November 11, 2021

The Invitation

 

ಬರಡು ಹಾದಿಯಲೆಷ್ಟು ಸ್ವಪ್ನಗಳ ಕುಸುಮಿಸಿದೆ

ಯಾವ ಶ್ರುತಿಯಲ್ಲಿಹುದೋ ನಿನ್ನೆದೆಯ ಮಿಡಿತ

ಹೆಬ್ಬಯಕೆಯೊಂದು ನಿನ್ನಾಳದಲಿ ಮೊರೆದಿರಲು

ಹೇಳು, ಅದಕೆಂದಿರುವುದೇ ನಿನ್ನ ತುಡಿತ?


ಹೊಸ ಚಿಗುರಿನಾಸೆಯಲಿ ಬೇಸರಿಸದೆಯೆ ಮತ್ತೆ

ಮತ್ತೆ ಬರಿದಾಗಿಸುವ ಶಿಶಿರಗಳನೊಪ್ಪಿ

ಜೇನಾಗಿ ಅರಸುವೆಯಾ ಒಲುಮೆಸುಮ ಮಕರಂದ

ಹೇಳು, ಮತ್ತೇಳುವೆಯ ಜೀವನವನಪ್ಪಿ?


ಬವಣೆಗಳ ಪೂರದಲಿ ಕೊಚ್ಚಿಹೋಗದೆ ಮಿಂದು

ಭರವಸೆಯ ನೆರವೊಂದ ನಂಬಿ ನೀ ನಿಂತು

ಮೈಯೊಡ್ಡಿ ಹರಿವಿನಲಿ ಬಗೆದು ನಿನ್ನೊಳ ಹರಿವ

ಹೇಳು, ನೀನಾಗುವೆಯಾ ಪಾರಕ್ಕೆ ತಂತು?


ನನ್ನೆದೆಯ ನೋವನ್ನು ನಿನ್ನೆದೆಯ ಬಾವನ್ನು

ಮರೆಯಿಸದೆ ಹೊದಿಸುತ್ತ ಸಾಂತ್ವನದ ತೆರೆಯ

ಅರಸದೆಯೆ ಬೇಗೆ ನೀಗುವ ಮಿಥ್ಯದಾಸರೆಯ

ಹೇಳು, ನಿಲ್ಲುವೆಯೇನು ತಾಳುತ್ತ ಹೊರೆಯ?


ಹುಸಿ ಎಲ್ಲೆಗಳ ಮೀರಿ ತುಂಬಿ ಹರ್ಷೋನ್ನ್ಮಾದ

ನಾವು ನಾವೆಂಬುದನು ಮರೆಸುತ್ತ ನಲಿವ

ಎಚ್ಚರವ ಮೀರಿ ಸ್ವಚ್ಛಂದದಲಿ ತೇಲಿಸುವ

ಹೇಳು, ನಿನದೆನ್ನುವೆಯಾ ನನ್ನೊಂದು ನಲವ?


ಬರಿದೆ ಬಣ್ಣದ ಕಥೆಯ ಹೇಳಿದರೂ ನೀ ಸರಿಯೇ

ನಿನ್ನ ನೈಜತೆಯ ನೀ ಮುಚ್ಚಿಡುವ ಬದಲು

ವಂಚನೆಯೋ ಸಂಚೋ ಜಗದಾರೋಪವೇನಿರಲಿ

ಹೇಳು, ನೀ ನಂಬುವೆಯಾ ನಿನ್ನನ್ನೆ ಮೊದಲು?


ಕಾರ್ಮೋಡವಿರಲು ಕೋಲ್ಮಿಂಚ ಬಳ್ಳಿಯ ಬೆಳಕೆ

ಸೊಗವೆಂದು ಹೊಂದುವೆಯಾ ಕತ್ತಲಲು ಶಾಂತಿ?

ಕೊರತೆಯೇ ತೊರೆಯಾಗಿ ಹರಿಯೆ ತಡಿಯಲಿ ನಿಂತು

ಹೇಳು, ನೀ ಕಾಣುವೆಯಾ ತಿಂಗಳಿನ ಕಾಂತಿ?


ಬೇಗೆ ದುಮ್ಮಾನಗಳ ರಾತ್ರಿಗಳ ಕಳೆಯುತ್ತ

ದಿನಸೊಡರ ಬೆಳಗುವುದೆ ಸಿರಿಯೆಂದು ತಿಳಿದು

ಹೇಗೊ ಎಂತೋ ಬಂದು ಕೂಡಿರುವೆ ನನಗಾಗಿ

ಹೇಳು, ನೀ ನಿಲ್ಲುವೆಯಾ ಬೆಂಕಿಯೊಳಗುರಿದು?


ಸೋಗುಗಳು ಆಗುಹೋಗುಗಳೆಲ್ಲ ಕಳೆದಂದು

ಹೇಳು ನಿನ್ನಾತ್ಮವನು ಕಾಪಿಡುವುದೇನು?

ಒಡಲಾಳದಲ್ಲೊಂದು ಬೆಳಕಿಹುದೇ? ಸುಧೆಯಿಹುದೇ?

ಹೇಳು, ಏಕಾಂತವನೆ ಬಯಸುವೆಯಾ ನೀನು?


Original by Oriah Mountain Dreamer


It doesn't interest me
what you do for a living.
I want to know
what you ache for
and if you dare to dream
of meeting your heart's longing.

It doesn't interest me
how old you are.
I want to know
if you will risk
looking like a fool
for love
for your dream
for the adventure of being alive.

It doesn’t interest me
what planets are
squaring your moon...
I want to know
if you have touched
the centre of your own sorrow
if you have been opened
by life's betrayals
or have become shrivelled and closed
from fear of further pain.

I want to know
if you can sit with pain
mine or your own
without moving to hide it
or fade it
or fix it.

I want to know
if you can be with joy
mine or your own
if you can dance with wildness
and let the ecstasy fill you
to the tips of your fingers and toes
without cautioning us
to be careful
to be realistic
to remember the limitations
of being human.

It doesn't interest me
if the story you are telling me
is true.
I want to know if you can
disappoint another
to be true to yourself.
If you can bear
the accusation of betrayal
and not betray your own soul.
If you can be faithless
and therefore trustworthy.

I want to know if you can see Beauty
even when it is not pretty
every day.
And if you can source your own life
from its presence.

I want to know
if you can live with failure
yours and mine
and still stand at the edge of the lake
and shout to the silver of the full moon,
"Yes."

It doesn't interest me
to know where you live
or how much money you have.
I want to know if you can get up
after the night of grief and despair
weary and bruised to the bone
and do what needs to be done
to feed the children.

It doesn't interest me
who you know
or how you came to be here.
I want to know if you will stand
in the centre of the fire
with me
and not shrink back.

It doesn't interest me
where or what or with whom
you have studied.
I want to know
what sustains you
from the inside
when all else falls away.

I want to know
if you can be alone
with yourself
and if you truly like
the company you keep
in the empty moments.