Thursday, December 5, 2024

ತಂತುನಾಭ

 


ತಂತುನಾಭವದು ಮೌನದಲಿ ಏಕಾಂತದಲಿ

ಚಿತ್ತಿರದ ದಾಂತಿಯಲಿ ಕಾಯುತ್ತಲಿತ್ತು

ತುತ್ತತುದಿಗಲ್ಲಿಂದ ಸುತ್ತಲಿನ ರಿಕ್ತತೆಯ 

ಮೊತ್ತವನು ಬೆದಕಲನುವಾಗುತ್ತಲಿತ್ತು


ತನ್ನೊಡಲ ಗೂಢದಲಿ ಸುತ್ತಿದ್ದ ನವಿರಾದ

ತಂತುಗಳನೊಂದೊಂದೆ ಬಿಡಿಸುತ್ತಲೆಸೆದು

ದಣಿವರಿಯದಂತೆ ಮೊಗೆಮೊಗೆದು ಹೊಮ್ಮಿಸುತಿತ್ತು

ಲಗುಬಗೆಯಲಾತ್ಮಸಾರದ ಜಾಲ ಬೆಸೆದು


ಆವರಿಸಿದಪ್ರಮೇಯಾಕಾಶನಿಧಿಗಳಲಿ

ಓ ಆತ್ಮ! ನೀ  ನಿಂತು ನಿರ್ಲಿಪ್ತನಾಗಿ

ಅವಿರತ ಧ್ಯಾನಿಸುವೆ ಸಾಹಸೋತ್ಸಾಹದಲಿ

ಸಂಸರ್ಗದನ್ವೇಷಣೆಯೆ ಗೆಯ್ಮೆಯಾಗಿ


ಎಳೆದೆಳೆದ ಸೂತ್ರವದು ಗೂಟವನು ಹಿಡಿವನಕ

ಪಾರಗಾಣುವ ಸೇತು ತಾನಾಗುವನಕ

ನೀನೆಸೆದ  ರೇಶಿಮೆಯ ನೂಲ ಗಾಳದಲೊಮ್ಮೆ

ತಾನೆ ಎಲ್ಲೋ ಸಿಲುಕಿ ವಶವಾಗುವನಕ




Original by Walt Whitman

A Noiseless Patient Spider 

A noiseless patient spider,
I mark’d where on a little promontory it stood isolated,
Mark’d how to explore the vacant vast surrounding,
It launch’d forth filament, filament, filament, out of itself,
Ever unreeling them, ever tirelessly speeding them.

And you O my soul where you stand,
Surrounded, detached, in measureless oceans of space,
Ceaselessly musing, venturing, throwing, seeking the spheres to connect them,
Till the bridge you will need be form’d, till the ductile anchor hold,
Till the gossamer thread you fling catch somewhere, O my soul.

Sunday, March 19, 2023

ಬದುಕು

 

ಓ ಬದುಕೇ ಉನ್ಮಾದಶಿಖೇ

ಮುದದ ನಿಗೂಢಾತ್ಮಜೆಯೇ

ನಿನ್ನಾಗಸಪಯಣದ ಹರಹು

ಆಗಲದಾನಂತತೆಯೇ


ಹಾರುವೆ ರೆಕ್ಕೆಗಳಲಿ ಹೊತ್ತು

ಪರಮಾದರ ತಾತ್ಸಾರ

ಮರ್ತ್ಯತೆಯಂತರ್ಯಾಮಿತ್ವ

ವೇದನೆ ಹರ್ಷಾಪಾರ


ಗಾಢಾಲಿಂಗನಗೈಯೆನನು

ದೌರ್ಬಲ್ಯದ ಕುರುಹಿರದೆ

ಬಿರು ಮೈ ತೆರೆಮೊಗವಿರೆ ಬಾಳೇ

ನಿಲು ಬೀಳದೆ ಧೃತಿಗೆಡದೆ


ನಿನ್ನೊಸಗೆಯನನ್ವೇಷಿಸುವೆ

ನಿನ್ನತಿಕಾಠಿಣ್ಯವನೂ

ಸಿಂಹದ ಘೋರಾರ್ಭಟದಂತೆ

ಮಧುಲಿಪ್ತ ವಸಂತವನೂ


ಸ್ವೀಕರಿಸುವೆ ನಾ ದೈತ್ಯನೊಲು

ದೇವರೊಲಾನಂದಿಸುವೆ

ಸೆಣಸುತ ಪಡೆವೆನು ನರನಂತೆ

ಶಿಶುವೊಲು ಹಿಗ್ಗುತ ನಲಿವೆ


ಬೇರೇನನು ಬೇಡೆನು ನಿನ್ನ

ವಿಧಿಲಿಖಿತದಂತೆ ನಡೆಸು

ದೊರೆತನ ದಾಸ್ಯವೊ ನನಗಿರಲಿ

ಅಳಿ ಬಾಳೇ ಯಾ ಅಳಿಸು


ವಲ್ಕಲದಲು ನಾನೇ ದೇವ

ದಿವ್ಯತೆ ಪಡೆವೆನು ಕುಸಿದೂ

ತುಳಿದರು ಗೆಲುವಲಿ ಮೆರೆಯುವೆನು

ಜೀವಿಸುವೆನು ನಾನಳಿದೂ 


Original by Sri Aurobindo


Mystic daughter of Delight,
Life, thou ecstasy,
Let the radius of thy flight
Be eternity.

On thy wings thou bearest high
Glory and disdain,
Godhead and mortality,
Ecstasy and pain.

Take me in thy wild embrace
Without weak reserve
Body dire and unveiled face;
Faint not, Life, nor swerve.

All thy bliss I would explore,
All thy tyranny.
Cruel like the lion's roar,
Sweet like springtide be.

Like a Titan I would take,
Like a God enjoy,
Like a man contend and make,
Revel like a boy.

More I will not ask of thee,
Nor my fate would choose;
King or conquered let me be,
Live or lose.

Even in rags I am a god;
Fallen, I am divine;
High I triumph when down-trod,
Long I live when slain.


Monday, December 5, 2022

ಮಂದಗತಿ

 
ನೀನೆಂದಾದರು ತಿರುಗುವ ತೊಟ್ಟಿಲ ಮೋಜಲಿ ಮಕ್ಕಳ ಕಂಡಿಹೆಯಾ
ಮಳೆಹನಿ ಚಟಪಟಗುಟ್ಟುತ ಇಳೆಮೈ ತಾಗುವ ಸಪ್ಪಳ ಕೇಳಿಹೆಯಾ 
ಅಲ್ಲಿಲ್ಲೆಲ್ಲೋ ಹಾರುವ ಪಾತರಗಿತ್ತಿಯ ಬೆಂಬಿಡದಾಡಿಹೆಯಾ
ಮುಳುಗುವ ದಿನದೊಳಗಿನ ಕರಗುವುದನು, ಕತ್ತಲ ಬರುವನು ಕಾದಿಹೆಯಾ 

ತಡೆ ತಡೆ ನಿನಗವಸರವೇಕೆ
ಏಕೀ ಪರಿ ಕುಣಿಯುವ ತವಕ 
ಮಣಿ ನೀ ಜೀವನದಲ್ಪತೆಗೆ 
ತಣಿ ನೀ ಹಾಡಿದು ಮುಗಿವನಕ 

ಕ್ಷಣವೂ ನಿಲ್ಲದೆ 'ಈಗಲೇ, ಈ ಕ್ಷಣ'ವೆನ್ನುತ ದಿನಗಳ ದೂಡಿಹೆಯಾ
ಕುಶಲಪ್ರಶ್ನೆಗೆ ಮಾರುತ್ತರವನ್ನಾಲಿಸದೆಯೆ ಮುನ್ನಡೆದಿಹೆಯಾ 
ಹಗಲಿನ ದುಡಿತದ ದಣಿವನು ನೀಗಿಸಲೆಂದೊರಗಲು ನೀ ರಾತ್ರಿಯಲಿ
ನಾಳಿನ ಸಾವಿರ ಜಂಬರ ಮಸ್ತಕದಲಿ ತಾಂಡವವನ್ನಾಡಿವೆಯಾ 

ನನ್ನೊಡನಾಡಲು ಬಾ ಎನ್ನುವ ಕಂದನ ಕರೆಯೆಡೆ ಕಿವಿಯಾನಿಸದೆ
ಕಣ್ಣೀರಿಗು ಮಿಡಿಯದೆ ಗಡಿಬಿಡಿಯಲಿ ಆಮೇಲಾಗಲಿ ಎನ್ನುವೆಯಾ 
ದೂರದ ಬಂಧುವನೊಮ್ಮೆಯು ನೆನೆಯದೆ ದಿನಗಳವೆಷ್ಟೋ ಸರಿದಿವೆಯಾ
ವ್ಯಸ್ತ ಮನಸ್ಸಿನ ಮರೆವಿನಲಗುಗಳು ಬಂಧದ ಸೂತ್ರವ ತರಿದಿವೆಯಾ 

ತಡೆ ತಡೆ ನಿನಗವಸರವೇಕೆ
ಏಕೀ ಪರಿ ಕುಣಿಯುವ ತವಕ 
ಮಣಿ ನೀ ಜೀವನದಲ್ಪತೆಗೆ 
ತಣಿ ನೀ ಹಾಡಿದು ಮುಗಿವನಕ 

ಗುರಿಯನು ಮುಟ್ಟುವ ಧಾವಂತದಿ ಪಯಣದ ಸುಖವೆಲ್ಲವ ಕಳೆದಂತೆ
ಆವೇಗವದಿರೆ ದಿನವೂ ತೆರೆಯದೆ ಬಂದುಡುಗೊರೆಯನ್ನೆಸೆದಂತೆ 

ಜೀವನವಿದು ಪಂದ್ಯವಿದಲ್ಲ
ಹೆಜ್ಜೆ ಮೆಲ್ಲನಿಲ್ಲಿಡಬೇಕು 
ಮೇಳದ ಕೊನೆಯಾಗುವ ಮುನ್ನ
ಗಾನದ ಸವಿಯನ್ನುಣಬೇಕು 


Original unknown













ಆದಿ

 

ಕೂಸು ಕೇಳಿದಳಮ್ಮ ನಾನೆಲ್ಲಿಂದ ಬಂದೆನು ಹೇಳು ನೀ

ಆವ ಕಡೆಯಿಂದಾವ ಊರಿಂದೆತ್ತಿ ತಂದೆಯೆ ನನ್ನ ನೀ


ಕೊಂಚ ಅಳುತಾ ಕೊಂಚ ನಗುತಾ ಬಾಚಿ ತಬ್ಬುತ ಕಂದನ

ಅಮ್ಮನೆಂದಳು ಕಂದ ನೀನೆನ್ನೆದೆಯ ಬಯಕೆಯ ಚಂದನ


ಎಳೆತನದ ಕೆಳೆಯಾಟದಲಿ ಮಾಡಿಟ್ಟ ಬೊಂಬೆಯಲಿದ್ದೆ ನೀ

ನಿತ್ಯಪೂಜೆಯಲಿಟ್ಟು ಅಳಿಸಿದ ಮಣ್ಣ ದೇವರಲಿದ್ದೆ ನೀ


ನಿನ್ನ ಸಾಕ್ಷಾತ್ಕರಿಸಲು ಪ್ರಾಣಪ್ರತಿಷ್ಠೆಯೆ ಸಾಧನ

ದೈವದಾರಾಧನೆಯಲೇ ಮಾಡಿದ್ದೆ ನಿನ್ನಾರಾಧನ


ನನ್ನೊಲವು ನನ್ನೆಲ್ಲ ಭರವಸೆ ನನ್ನ ಜೀವನಪಾತ್ರದಿ

ಹರಿದೆ ನೀ ನನ್ನಮ್ಮನೊಡಲಿನ ಕರುಳ ಬಳ್ಳಿಯ ಸೂತ್ರದಿ


ಮನೆಮನಗಳನ್ನಾಳುವಾ ಅವಿನಾಶಿಯಾತ್ಮದ ಮಡಿಲಿದೆ

ಜನ್ಮಜನ್ಮಗಳಿಂದ ನಿನಗದು ತನ್ನ ಜೀವವನೂಡಿದೆ


ನನ್ನ ನವತಾರುಣ್ಯಪುಷ್ಪವು ಮೆಲ್ಲನರಳುವ ಹೊತ್ತಲೂ

ಅಂತರಂಗದ ಗಂಧವಾಗುತ ನೀ ಪಸರಿಸಿದೆ ಸುತ್ತಲೂ


ಯೌವನದ ಸೊಬಗಿನಲು ನಿನ್ನದೆ ಸೌಕುಮಾರ್ಯವು ಮೂಡಿತು

ಉದಯಸೂರ್ಯನ ಬರವ ಸಾರುವ ಮೂಡ ಕಾಂತಿವೊಲಾಡಿತು


ನಾಕದೊಲುಮೆಯ ರೂಪವೇ ! ಮುಂಜಾವ ಬೆಳಕಾಲಾಪವೇ!

ಬಾಳ ತೊರೆಯಲಿ ತೇಲಿ  ಬಂದೆನ್ನೆದೆಯ ಬೆಳಗಿದ ದೀಪವೇ!


ನಿನ್ನ ನೋಡುತಲಿಂದು ಪರಮಾಶ್ಚರ್ಯಭಾವದಿ ಮಿಂದಿಹೆ

ವಿಶ್ವದಕ್ಕರೆ ಪಾತ್ರವೇ ! ನೀ ನನ್ನ ತೆಕ್ಕೆಗೆ ದಕ್ಕಿಹೆ !


ಕಂದ! ನಾ ಬಿಗಿದಪ್ಪುವೆನು ನೀ ಕಳೆದುಹೋಗುವ ಭಯದಲಿ

ಯಾವ ಮಾಯೆಯೊ ಜಗದ ನಿಧಿಯನು ಬಂಧಿಸಿದೆ ಈ ಕರದಲಿ!


Original by Rabindranath Tagore


The Beginning

"Where have I come from, where did you pick me up?" the baby asked its mother.

    She answered, half crying, half laughing, and clasping the baby to her breast-

    "You were hidden in my heart as its desire, my darling.

    You were in the dolls of my childhood's games; and when with clay I made the image of my god every morning, I made the unmade you then.

    You were enshrined with our household deity, in his worship, I worshipped you.

    In all my hopes and my loves, in my life, in the life of my mother you have lived.

    In the lap of the deathless Spirit who rules our home you have been nursed for ages. 

   When in girlhood my heart was opening its petals, you hovered as a fragrance about it.

    Your tender softness bloomed in my youthful limbs, like a glow in the sky before the sunrise.

    Heaven's first darling, twain-born with the morning light, you have floated down the stream of the world's life, and at last you have stranded on my heart.

    As I gaze on your face, mystery overwhelms me; you who belong to all have become mine.

    For fear of losing you I hold you tight to my breast. What magic has snared the world's treasure in these slender arms of mine?"

ಪೀತಸುಮ

 

ಒಬ್ಬಂಟಿ ನಾನಲೆಯುತಿದ್ದಾಗ ಮುಗಿಲೊಂದು

ಗಿರಿಶಿಖರ ಕಣಿವೆಗಳ ಮೇಲಲೆಯುವಂತೆ  

ಕಣ್ಣಮುಂದಾಕ್ಷಣದಲೊದಗಿತ್ತು ಗುಂಪೊಂದು

ಪೀತಸುಮರಾಜಿಯದು ಹೊನ್ನ ಸಿರಿಯಂತೆ

ಕೆರೆದಂಡೆಯಲ್ಲಿ, ತರುಛಾಯೆಯಲ್ಲಿ

ನಲಿಯುತ್ತಲಿತ್ತು ತಾ ತಂಬೆಲರಿನಲ್ಲಿ


ಆಕಾಶಗಂಗೆಯೊಡಲನು ತುಂಬಿ ಹೊಳೆಹೊಳೆವ

ಕೋಟಿ ನಕ್ಷತ್ರಸಂಪದದಂತೆ ಅನಿಶ

ದೃಷ್ಟಿ ಹರಿವನಕ ಚಾಚಿದ್ದವವು ನೆಟ್ಟಂತೆ 

ಸಾಲಾಗಿ ದಂಡೆಗುಂಟವು ಹೇಮಕಲಶ

ಎಣಿಕೆ ಸಿಗದಾಯ್ತು, ನೋಟವೊಂದರಲಿ

ಮುಡಿದೂಗುತ್ತಿದ್ದವಾನಂದನಾಟ್ಯದಲಿ


ಸ್ಫಟಿಕ ಜಲದೆಡೆಯಲ್ಲಿ ಸುಮನರ್ತನದ ಮೋದ

ನಾಚಿಸಿತ್ತಲೆಗಳೋಳಿಯ ಕಾಂತಿಯನ್ನು

ಹರ್ಷಸಮ್ಮರ್ದ ಪರಮಾಹ್ಲಾದದಾ ಸಂಗ

ಮುದಗೊಳಿಸದಿಹುದೆಂತು ಕವಿಯ ಮನವನ್ನು 

ನೋಡನೋಡುತ್ತಾ ಸೆರೆಯಾಯ್ತು ಚಿತ್ತ

ಬಗೆಯದಾದೆನು ಆಗ ಆ ನಿಧಿಯ ಮೊತ್ತ


ಈಗ ಒಮ್ಮೊಮ್ಮೆ ನನ್ನಂತೆ ನಾನಿರುವಾಗ

ಯಾವುದೋ ನೆನಹೊ ಶೂನ್ಯವೊ ಕಾಡಿದಾಗ

ತೋರ್ವುದೊಳಗಣ್ಣಿಗಾ ದಿವ್ಯ ಕಾಣ್ಮೆಯ ದೀಪ್ತಿ

ಏಕಾಂತದಾನಂದ ಸುಧೆ ಹರಿವುದಾಗ

ನನ್ನೆದೆಯ ಸುಮವೂ ಒಲಿದೊಲಿದು ಬಿರಿದು

ಹೊನ್ನ ಸುಮಗಳ ಕೂಡೆ ನಲಿಯುತಾಡುವುದು


Original by William Wordsworth 


I wandered lonely as a cloud

That floats on high o'er vales and hills,

When all at once I saw a crowd,

A host, of golden daffodils;

Beside the lake, beneath the trees,

Fluttering and dancing in the breeze.


Continuous as the stars that shine

And twinkle on the milky way,

They stretched in never-ending line

Along the margin of a bay:

Ten thousand saw I at a glance,

Tossing their heads in sprightly dance.


The waves beside them danced; but they

Out-did the sparkling waves in glee:

A poet could not but be gay,

In such a jocund company:

I gazed—and gazed—but little thought

What wealth the show to me had brought:


For oft, when on my couch I lie

In vacant or in pensive mood,

They flash upon that inward eye

Which is the bliss of solitude;

And then my heart with pleasure fills,

And dances with the daffodils.


Tuesday, October 11, 2022

ಎಲ್ಲ ನಾನೇ

 

ಪಳಗದೆಳಸು ಪಕ್ಕಗಳಿಗೆ ನಿಲುಕದಿರುವ ಲೋಕದೊಳಗೆ

ಧಗಧಗಿಸುತ ನಿಂತ ನಿನ್ನ ಭವ್ಯ ರೂಪವನ್ನೇ

ಒಡಲ ಕಿಡಿಯ ಬೆಳಕಿನಲ್ಲಿ ತವಕದಲ್ಲಿ ಅರಸಹೊರಟು 

ಮಿನುಗುತಿರುವ ಜಗದ ಮಿಣುಕುಹುಳುಗಳೆಲ್ಲ ನಾನೇ


ಗುಡ್ಡ ಬೆಟ್ಟ ಕಾನು ತೋಪಿನಚ್ಚ ಹಸುರಿನೊಳಗೆ ಕುಳಿತು

ತಂಪಿನಲರ ಶ್ರುತಿಯ ಹಿಡಿದು ನಿನ್ನ ಗಾನವನ್ನೇ

ಮಂತ್ರವಾಗಿ ಪದ್ಯವಾಗಿ ಮಧುರವಾಗಿ ಹಾಡುತಿರುವ

ಪ್ರೇಮವುಕ್ಕಿದೆದೆಯ ಹಾಡುಹಕ್ಕಿಹಿಂಡು ನಾನೇ


ಮರುಕವಿರದೆ ತರಿದು ಕೊಂದು ಬಗೆದು ತೆಗೆದ ಕರುಳ ತಿರುಳ

ಬಿಸಿಯ ನೆತ್ತರಲ್ಲಿ ನಿನ್ನ ಗಾಹಿನಾಳವನ್ನೇ

ಒಂದವರ್ಣನೀಯ ಲೇಲೆಯಲ್ಲಿ ನಿನ್ನ ಮಾಯೆಯಲ್ಲಿ

ಕಾಣಬಯಸಿ ಕೆಚ್ಚ ಮೆರೆವ ಮೃಗಸಮೂಹ ನಾನೇ


ಅರಸಿ ಹಾಡಿ ಕೊಲ್ಲುತಿಹ ಸಮಸ್ತ ಜೀವಕೋಟಿ

ಅವುಗಳಂತರಂಗದಲ್ಲಿ ನನ್ನ ನಿನ್ನ ಭೇಟಿ


Original by The Inevitable Word


https://medium.com/inevitable-word/thy-conspiracies-1a2ff969d7a3










Friday, September 9, 2022

Autumnal



It seems to me that I'm ready now

To leave behind my days of luster

Of clinging and swaying carefree

Now I'm all set to turn ochre


I've been awash with light sometimes 

Sometimes with hues of dawn and dusk 

I've glistened in dancing moonbeams

I've melted into night's consuming black


Now I await this grip to slack

Reminiscing every joy and duress

Donning bit by bit a mellow yellow

Longing for breeze's tender caress


To slide me off my transitory perch

My silhouette against the bright sky

Suspended, for a brief moment

As if I stop to say my goodbye


Fallen and waiting to be crisped by sun

Surrender to wind's vagaries I must

Until I find eternal fulfillment 

When tired feet crackle me to dust