ಗಾಳಿಯಲಿ ನಾ ಹಾರುವಂತಿದ್ದರೊಂದು ದಿನ
ಮತ್ತೆಂದು ಧರೆಗಿಳಿಯಬಾರದೆಂದು
ನೆನೆದು ಧೂಳ್ಕಣ ಜಪಿಸಿ ಧ್ಯಾನಿಸಿದಳನವರತ
ಶ್ರದ್ಧೆಯಲಿ ದೈವ ತಾನೊಲಿಯಲೆಂದು
ವರ ನೀಡಿತಾ ದೈವ ಬೀಸಿತ್ತು ಬಿರುಗಾಳಿ
ಧೂಳ್ಕಣವನೊಯ್ದಿತ್ತು ತನ್ನೊಂದಿಗೆ
ತರು ಮುಡಿಗೆ ಗಿರಿ ಗುಡಿಗೆ ನಭದ ನೀಲಿಯ ತುದಿಗೆ
ಅವಳ ಮನ ಧನ್ಯತೆಯ ಪಡೆಯುವೆಡೆಗೆ
ಕಾಲ ಸರಿದಿತ್ತು ಮೋಡಿಯ ಮೆರುಗು ಮಾಸಿತ್ತು
ಸೋತು ಮನ ಬಯಸಿತ್ತು ಮತ್ತೆ ತಾವ
ಪಯಣ ಹಂಬಲಿಕೆ ಬೆದಕಾಟ ಸಾಕೆನಿಸಿತ್ತು
ತನ್ನೀ ಪ್ರಬುದ್ಧ ಔನ್ನತ್ಯ ಭಾವ
ಮತ್ತೇನು ಆಗದೆಯೆ ಬರಿದೆ ಧೂಳ್ಕಣವಾಗಿ
ತನ್ನಂತೆ ತಾನಿರುವ ನೈಜ ಸ್ಥಿತಿಗೆ
ಮರಳಬೇಕೆಂಬಂತರಂಗದಾಕ್ರಂದನಕೆ
ಸ್ಪಂದಿಸಿತು ದೈವ, ಬಂದಳು ಭೂಮಿಗೆ
ಭ್ರಾಂತಿಯೆಲ್ಲವ ಕಳೆದು ವಿಶ್ರಾಂತಿಯನು ಪಡೆದು
ಅರಿತಳವಳಾಗ ತನ್ನಿರುವ ಬಗೆಯ
ನೋಡುತ್ತ ಬಾನತ್ತ ಮೆಲುನಗೆಯು ಸ್ಫುರಿಸಿತ್ತು
ನಭದಾಚೆಗಿನ ಯಾನದಸಲು ಗುರಿಯ
ಮರೆಯಾಯ್ತು ತಿಳಿವು, ಬಯಕೆಗಳ ಹೊರೆ, ಬರಿ ಶೂನ್ಯ
ಶೂನ್ಯದೊಳಗಿರುವಿಕೆಯ ಧನ್ಯ ಘನತೆ
ಹಂಬಲಿಕೆ ಬೆದಕಾಟಗಳ ಗೊಡವೆಯಿಲ್ಲದಿಹ
ನೆಮ್ಮಷ್ಟೆ, ಬರಿದೆ ಇರುವಿಕೆ, ನೈಜತೆ
ತಿಳಿಗಾಳಿ ಬೀಸಿತ್ತು, ಹೊತ್ತು ಮಣ್ಣಿಗೆ ಬಿತ್ತ
ಮಳೆಗರೆದು ಬಿಸಿಲಾಗಿ ಹೂವಾಗಲು
ಇನ್ನಿಲ್ಲದಂತಾಗಿ ಕಣಕಣದಿ ಕರಗುತ್ತ
ಧೂಳ್ಕಣವು ಎಲ್ಲದರಲೊಂದಾದಳು
Original - Unknown