ನಸುಗೆಂಪ ಚೆಲ್ಲಿಹುದು ಬೆಳಕಿನೆಳೆ ಮೂಡಣಕೆ
ಬಣ್ಣಗಳ ತೇರೊಂದನೆಳೆದು ನಿಲಿಸಿ
ಕಣ್ಣೆವೆಯ ಚಾಮರದ ಸ್ವಾಗತವ ಕೋರಿಹುದು
ಆಂತರ್ಯ ದೀಪದೋರಣವನಿರಿಸಿ
ಸೇರುತ ದಿಗಂತದಲಿ ನಮ್ಮೀರ್ವರೀ ಬೆಳಕು
ಬಾನಗಲ ಬೆಳಕಿನೋಕುಳಿಯಾಗಲಿ
ಹಕ್ಕಿಗಳ ಕೊರಳಿಂದ ತೇಲಿ ನಿನ್ನುಲಿ ನನ್ನ
ಸುಪ್ತ ಕರಣಕೆ ದೀಪ್ತಿಕಣವಾಗಲಿ
ಮೃಣ್ಮನದ ಮಾರ್ದವಕೆ ಜೀವಜಲ ಹನಿಯಾಗಿ
ಮೃದ್ಗಂಧ ಸಾರವದು ಹೊಮ್ಮಿ ಬರಲಿ
ಭಾವದೆಳೆಯಲಿ ಸೇರಿ ನುಡಿಮೌಕ್ತಿಕಗಳೆಲ್ಲ
ನಿನ್ನಲಂಕಾರಮಾಲಿಕೆಯಾಗಲಿ
ಭೂಸ್ಪರ್ಶದಿಂದೆನ್ನ ಪದತಲದಿ ಹೊಸದೊಂದು
ಚೈತನ್ಯದಾಕರ್ಷ ಒಳಸೇರಲಿ
ದಿವ್ಯಪ್ರಕಾಶದಿಂದೂರ್ಧ್ವಗತಿ ಪಡೆಯುತ್ತ
ನನ್ನ ಮನದುತ್ಕರ್ಷ ತಾನಾಗಲಿ
ಅರಿವಿನಾಚೆಯ ಲೋಕದಲ್ಲಿ ನಿನ್ನಡಿಹೂವ
ಸನ್ನಿಧಿಗೆ ನನ್ನಿರುವು ಸುಮವಾಗಲಿ
No comments:
Post a Comment