Wednesday, October 13, 2021

ಬಾನಾಡಿ

ಪಂಜರದ ಬಾನಾಡಿ ಭವ ಭಾವಗಳ ಬಂದಿ

ಉಸಿರ ಬಲದಿಂದೆಂತೋ ಜೀವಿಸಿಹೆನು

ಹಾತೊರೆಯುತಿದೆ ಜೀವ ನೀ ರೆಕ್ಕೆಯೊಳಹೊಕ್ಕು

ಬಿಡುಗಡೆಯ ಗರಿಗುಸಿರ ತುಂಬುವುದನು


ಓ ಗಾಳಿಯೇ ಬಾನ ನೀಲಿಯನು ನೀ ಸೋಕಿ

ತಾ ನನ್ನ ಬಳಿಗದರ ವಿಸ್ತರವನು

ಶರಧಿಯಲೆಗಳ ದನಿಯ ಕರಗಿಸುತ ನಿನ್ನೊಳಗೆ

ಬಳಿಸುಳಿದು ಮತ್ತುಲಿದು ತಣಿಸೆನ್ನನು


ಮಲೆಗಳೆತ್ತರದ ನಿರ್ಭಾರದನುಭವ ಸಾರ

ಹರಿಸಿಬಿಡು ಇದ್ದಲ್ಲೆ ತೇಲಿಬಿಡುವೆ

ಕಾನ ಬಗೆ ಬಗೆ ಹಸಿರ ಸತ್ವ ಲೇಪವ ತಂದು

ತೀಡಿಬಿಡು ಹೊಸಬಣ್ಣವನ್ನೆ ತಳೆವೆ


ಗರಿದುಂಬಿದಾಸೆಗಳು ನೂರೆಂಟು ಕನಸುಗಳು

ನನ್ನಂತೆ ಸಂಕೋಲೆಗಳ ಮಿತಿಯಲಿ

ಹೊರಳಾಡುತೆನ್ನೆದೆಯ ಹಾಡಾಗಿ ಹೊಮ್ಮಿಹವು

ನಿನ್ನಾಲಿಕೆಯೆ ನನ್ನ ನಲಿವಾಗಲಿ

No comments:

Post a Comment