ಎಲ್ಲ ಅಮ್ಮ ಹೇಳಿದ ಕಥೆಯಲ್ಲಿದ್ದಂತೆಯೇ ಇತ್ತು. ದೊಡ್ಡ ಮರದ ರೆಂಬೆಯ ತುಂಬ ಪುಟ್ಟ ಪುಟ್ಟ ಹಸಿರು ಚಿಗುರೆಲೆಗಳು. ಬಾನು ಆತುರಾತುರವಾಗಿ ಅಷ್ಟೋ ಇಷ್ಟೋ ಉಳಿದ ಬೆಳಕನ್ನು ತನ್ನ ಅಂಗಳದಿಂದ ಭೂಮಿಗೆ ಮೊಗೆದು ಮೊಗೆದು ಸುರಿಯುತ್ತಿತ್ತು. ಚಿಗುರೆಲೆಗಳು ಆ ಹೊಂಬೆಳಕ ಹೊನಲಿನಲ್ಲಿ ಮುಳುಗೇಳುತ್ತಾ ತಮ್ಮಷ್ಟಕ್ಕೆ ತಾವೇ ನಗುತ್ತಿದ್ದವು. ಪುಟ್ಟಿ ತನ್ನ ನೆಚ್ಚಿನ ಗುಲಾಬಿ ಬಣ್ಣದ ಲಂಗ ತೊಟ್ಟಿದ್ದಳು. ತೆಳುವಾದ ನುಣುಪಾದ ಬಟ್ಟೆ, ಅಲ್ಲಲ್ಲಿ ಪುಟ್ಟ ಪುಟ್ಟ ಬೆಳ್ಳಿ ನಕ್ಷತ್ರಗಳು. ತನ್ನ ಪುಟ್ಟ ಕೈಗಳಲ್ಲಿ ಲಂಗದ ಅಂಚನ್ನು ಹಿಡಿದು ‘ಒಂದು ಎರಡು ಮೂರು’ ಎಂದು ನಿಂತಲ್ಲೇ ತಿರುಗಿದಳು. ಹಾಗೆ ತಿರುಗುವಾಗ ಒಂದು ನಕ್ಷತ್ರ ಅವಳ ಲಂಗದಿಂದ ಹಾರಿ ಹೋಗಿ ಬಾನಿಗೆ ನಾಟಿತು. ಅದೇ ಅವತ್ತಿನ ಬಾನಲ್ಲಿ ಕಂಡ ಮೊದಲ ನಕ್ಷತ್ರ. ಅವಳ ಗುಲಾಬಿ ಲಂಗ ದೊಡ್ಡ ಛತ್ರಿಯಂತೆ ಬಿಚ್ಚಿಕೊಂಡು ಅವಳು ಥಟ್ಟನೆ ಕೂತಾಗ ಧೊಪ್ಪೆಂದು ನೆಲದ ಮೇಲೆ ಗುಂಡಗೆ ಹರಡಿಕೊಂಡಿತು - ಸುತ್ತ ಬೆಳ್ಳಿ ನಕ್ಷತ್ರಗಳು, ಮಧ್ಯದಲ್ಲಿ ಪುಟ್ಟಿ.
ಈ ವಿಸ್ಮಯ ಲೋಕದಲ್ಲಿ ಸೋಪಿನ ಗುಳ್ಳೆಗಳನ್ನು ಊದದಿದ್ದರೆ ಹೇಗೆ? ಪುಟ್ಟಿ ತನ್ನ ಕೈಗಳನ್ನು ಒಂದಕ್ಕೊಂದು ಉಜ್ಜಿ ಉಫ್ ಎಂದು ಊದಿದಳು. ಪುಟ್ಟ ಗುಳ್ಳೆಯೊಂದು ಹೊಮ್ಮಿ ಬಂದಿತು. ಬಂದದ್ದೇ ಮೇಲೆ ಹಾರುತ್ತಾ ಆ ಬೆಳ್ಳಿ ನಕ್ಷತ್ರದ ಪಕ್ಕ ಹೋಗಿ ನಿಂತಿತು. ಮತ್ತೊಂದು ಗುಳ್ಳೆ ಊದಿದಳು , ಮುಂಚಿನದ್ದ್ದಕ್ಕಿಂತ ದೊಡ್ಡದು. ಅದರೊಳಗೆ ಪುಟ್ಟಿಯದ್ದೇ ಪ್ರತಿರೂಪ. ಅದೂ ಹೋಗಿ ನಕ್ಷತ್ರದ ಪಕ್ಕದ ಗುಳ್ಳೆಯಲ್ಲಿ ಸೇರಿಕೊಂಡಿತು. ಗುಳ್ಳೆಯ ಹಿಂದೆ ಗುಳ್ಳೆ, ಒಂದೊಂದು ಗುಳ್ಳೆಯೊಳಗೂ ಪುಟ್ಟಿ. ಒಂದೊಂದು ಗುಳ್ಳೆ ಊದುವಾಗಲೂ ಪುಟ್ಟಿಯ ಆಕಾರ ಕ್ಷೀಣವಾಗುತ್ತಿತ್ತು, ಅದು ಹೋಗಿ ನಕ್ಷತ್ರದ ಪಕ್ಕದ ಗುಳ್ಳೆಯೊಳಗೆ ಲೀನವಾದಾಗ ಅದರೊಳಗಿನ ಪುಟ್ಟಿಯ ಆಕಾರ ದೊಡ್ಡದಾಗುತ್ತಿತ್ತು. ಗುಳ್ಳೆಯೊಳಗಿರುವ ಪುಟ್ಟಿ, ಗುಳ್ಳೆ ಊದುವ ಪುಟ್ಟಿ - ಒಬ್ಬರನ್ನೊಬ್ಬರು ನೋಡಿ ಹಿಗ್ಗುತ್ತಿದ್ದರು .
ಪುಟ್ಟಿ ಈಗ ಇಷ್ಟೇ ಚೋಟುದ್ದ. ಒಮ್ಮೆ ದೀರ್ಘವಾಗಿ ಉಸಿರೆಳೆದು ಊದಿದಳು - ಉಫ್........
ಕೊನೆಯ ಗುಳ್ಳೆಯೊಳಗೆ ಉಳಿದಷ್ಟೂ ಪುಟ್ಟಿಯ ಆಕಾರ ಹೊಕ್ಕು ನಕ್ಷತ್ರದ ಪಕ್ಕದ ದೊಡ್ಡ ಗುಳ್ಳೆಯೊಳಗೆ ಸೇರಿಹೋಯಿತು. ಅಷ್ಟು ಹೊತ್ತಿಗೆ ಬೆಳ್ಳಿ ನಕ್ಷತ್ರದ ಅಕ್ಕ ಪಕ್ಕ ಸುತ್ತಮುತ್ತ ಫಳಫಳನೆ ನಕ್ಷತ್ರಗಳು ಹೊಳೆಯಲಾರಂಭಿಸಿದ್ದವು. ಎಲ್ಲಿಂದಲೋ ಬೀಸಿದ ಗಾಳಿ ಆ ನಕ್ಷತ್ರಗಳ ಹಾದಿಯಲ್ಲಿ ಪುಟ್ಟಿ ಇದ್ದ ನೀರ್ಗುಳ್ಳೆಯನ್ನು ಇನ್ನೆಲ್ಲಿಗೋ ಹೊತ್ತೊಯ್ಯಿತು.
*****
ಪುಟ್ಟಿ ಬಿಡಿಸಿ ಬಣ್ಣ ತುಂಬಿದ್ದ ಚಿತ್ರವೊಂದು ಮೇಜಿನ ಮೇಲಿದೆ. ಪುಟ್ಟ ಮನಸ್ಸು ಲೌಕಿಕದ ಪರಿಧಿಯ ಸುತ್ತ ಅಲೋಕಾಯಾನದಲ್ಲಿ ಸುತ್ತಾಡಿ ಬಂದ ಕುರುಹುಗಳು ಅದರಲ್ಲಿ ತುಂಬಿವೆ. ಸಂಜೆಯ ಬಣ್ಣ ಕತ್ತಲಲ್ಲಿ ಕರಗುವ ಹೊತ್ತಿನಲ್ಲಿ ಚಿತ್ರದೊಳಗಿರುವ ಬೆಳ್ಳಿ ನಕ್ಷತ್ರಗಳು ಕೋಣೆಯೊಳಗೆ ಅವೇದ್ಯ ವಿಸ್ಮಯವನ್ನು ಹರಡುತ್ತಿವೆ, ಪುಟ್ಟಿ ಮತ್ತೆ ಬಂದಳೋ ಎನ್ನುವಂತೆ. ಈ ಭಾವಸಾಂದ್ರತೆ ಅವಳ ಇರುವಿಕೆಯದ್ದೋ ಇಲ್ಲದಿರುವಿಕೆಯದ್ದೋ?
No comments:
Post a Comment