Tuesday, November 16, 2021

ತಾಯಿ

 

ಇದ್ದಳೊಬ್ಬಳು ಮಗುವಿಲ್ಲದ ತಾಯಿ. ಒಮ್ಮೆ ಅವಳಿಗೊಂದು ಕನಸಾಯಿತು. ಬಟಾಬಯಲು; ಹಸುಗೂಸಿನ ಹಸಿವಿನ ಆರ್ತನಾದ ಕಿವಿಗಳಿಗೆ ಕೇಳಿಸಿದೆ; ಮಗುವೆಲ್ಲಿ? ಮಗುವಿಲ್ಲ, ಮಗುವಿನಾಕಾರದ ನೆರಳಷ್ಟೇ. ಎತ್ತಿಕೊಂಡು ಸಮಾಧಾನ ಮಾಡೋಣವೆಂದರೆ ಅದು ಅಮೂರ್ತ, ಅರೂಪ. ಆ ಕನಸಿನೊಳಗೆ ಅವಳಲ್ಲೊಂದು ಅವೇದ್ಯ ಮಮಕಾರ ಮೊಳೆಯಿತು. ಎಚ್ಚರವಾಗುವ ಹೊತ್ತಿಗೆ ಅದು ಹೆಮ್ಮರವಾಗಿತ್ತು. ಉಕ್ಕುವ ಆ ಮಾತೃತ್ವದ ಹರಿವಿಗೆ ಪಾತ್ರವೊಂದು ಬೇಕಲ್ಲ?! ನಾಲ್ಕಾರು ಸಸಿಗಳನ್ನು ನೆಟ್ಟಳು. ಉಣಿಸಿದಷ್ಟೂ ತುಂಬಿ ತುಂಬಿ ಬಂದ ವಾತ್ಸಲ್ಯವನ್ನು ಹತ್ತಾರು, ನೂರಾರು ಸಸಿಗಳಿಗೆ ಎರೆದಳು; ಪೊರೆದಳು. ಸಸಿಗಳು ಮರವಾಗಿ ಮೆರೆದಾಗ ಅವಳ ಪೋಷಣೆ ಸಾಕಾರ, ವಾತ್ಸಲ್ಯ ಸಾಕ್ಷಾತ್ಕಾರ. ಬಯಲುಕೂಸಿನ ಕನಸು ಮರಳಿತ್ತು. ಈ ಬಾರಿ ಬಯಲಿನಲ್ಲೆಲ್ಲೆಲ್ಲೂ ಎತ್ತರದ ಮರಗಳು. ಅದರ ನಟ್ಟನಡುವೆ ನಿಂತ ಅವಳು ಆ ಮರಗಳೊಳಗೆ  ಮೆಲ್ಲನೆ ಕರಗಿದ್ದಳು. ಅವಳ ಕೈಗಳೇ ಈಗ ಆ ಮರದ ರೆಂಬೆಗಳು; ಮಡಿಲೇ ಕಾಂಡ; ಸೆರಗೇ ಹಸಿರೆಲೆಗಳ ಹಾಸು. ತನ್ನ ಅತಿಮಾನುಷ ಕೈಗಳಿಂದ ಅಳುತ್ತಿದ್ದ ಹಸುಗೂಸನ್ನು ಮಡಿಲಿಗೆತ್ತಿಕೊಂಡಳು. ಸೆರಗ ಮರೆಯಲ್ಲಿ ಅಳುವು ನಿಂತಿತ್ತು. ಆ ಅಮೂರ್ತ, ಅರೂಪ ಕೂಸಿನ ಹಸಿವು ತಣಿದಿತ್ತು.

No comments:

Post a Comment