Thursday, November 11, 2021

Three bells

 


ಸಹ್ಯಾದ್ರಿ ಕಣಿವೆಯಲಿ ದಟ್ಟಡವಿ ನಡುವಿನಲಿ

ತೇಗ ತರುಗಳ ಮಧ್ಯೆ ಪುಟ್ಟದೊಂದೂರು

ರವಿಕಾಂತಿ ತೋಯಿಸಿದ ಶುಭ್ರ ಬಾನಡಿಯಂದು

ವಿಸ್ಮಯಕೆ ಸಾಕ್ಷಿಯಾಗಿತ್ತೊಂದು ಸೂರು


ಕಿಣಿಕಿಣಿಯೆನುವ ಗೆಜ್ಜೆ ಗಿಲಿಗಿಲಿಯೆನುವ ಗಿಲಕಿ

ಸಂತಸದ ಮೆಲುನಗೆಯ ಹಿಮ್ಮೇಳವಿತ್ತು

ತೊಟ್ಟಿಲಲಿ ಪುಟ್ಟ ನಾರಾಯಣನ ತೂಗುತ್ತ

ಹಿರಿಕೊರಳುಗಳ ವೃಂದ ಹರಸುತ್ತಲಿತ್ತು 


ದೇವ ನೀನೊಲಿದು ಬೆಳಕಾಗಿ ನಳನಳಿಸು

ಮನದಿಂದ ಭವದಾಸೆಗಳ ಹೊರೆಯನಿಳಿಸು

ಈ ದಿವ್ಯ ಘಳಿಗೆಯಲಿ ನಮ್ಮ ನೀ ಹರಸು

ಕಂದನೆದೆಗನವರತ ಒಲವ ನೀ ಹರಿಸು


ಸಹ್ಯಾದ್ರಿ ಕಣಿವೆಯಲಿ ದಟ್ಟಡವಿ ನಡುವಿನಲಿ

ಮೇರು ಗಿರಿಶಿಖರಗಳು ಕಾಯುವೆಡೆಯಲ್ಲಿ

ಅಂದು ಸಿರಿಲಕುಮಿಯೊಲಿಯುತ್ತ ನೆಲೆಯಾಗಿರಲು

ತರುಣ ನಾರಾಯಣನ ಹೊಳೆವ ಕಂಗಳಲಿ


ಶುಭವ ಕರೆಯುತಲಿತ್ತು ದಿಬ್ಬಣದವರ ಗುಲ್ಲು

ಸೌಭಾಗ್ಯವತಿ ವರಿಸಲಿದ್ದಳಾ ವರನ

ಬಾಳಿನಲಿ ಬಂದ ಬಂಗಾರದಾದಿನವಿತ್ತು

ಮಂಗಳದ ನಾದಗಳ ವೃಂದದನುರಣನ


ದೇವ ನೀನೊಲಿದು ಬೆಳಕಾಗಿ ನಳನಳಿಸು

ಮನದಿಂದ ಭವದಾಸೆಗಳ ಹೊರೆಯನಿಳಿಸು

ದಿವ್ಯೋತ್ಸವದ ಸಂಭ್ರಮವನು ನೀ ಹರಸು

ವಧುವರರಿಗನವರತ ಒಲವ ನೀನುಣಿಸು


ಸಹ್ಯಾದ್ರಿ ಕಣಿವೆಯಲಿ ದಟ್ಟಡವಿ ನಡುವಿನಲಿ

ಬಿರುಮಳೆಯ ಸುರಿಸಿತ್ತು ಕಾರ್ಮೋಡ ಕುಕ್ಷಿ

ಮಬ್ಬು ಮುಸುಕಿದ ಬೆಳಗಿನಲ್ಲಂದು ಇಹಯಾತ್ರೆ

ಮುಗಿಸಿತ್ತು ನಾರಾಯಣನ ಜೀವಪಕ್ಷಿ


ಬಂದಲ್ಲಿಗೆಯೆ ಮರಳಲಿದ್ದ ನರಹೃದಯದಲಿ

ನೆಲೆಯಿದ್ದ ಸಚ್ಚಿದಾನಂದವನು ನೆನೆದು

ನೆರೆದ ಮನಗಳ ವೃಂದ ಮೌನವನು ತಳೆದಿತ್ತು

ನಾರಾಯಣನ ನಾಮ ಜಪವೊಂದನುಳಿದು


ದೇವ ನೀನೊಲಿದು ಬೆಳಕಾಗಿ ನಳನಳಿಸು

ಮನದಿಂದ ಭವದಾಸೆಗಳ ಹೊರೆಯನಿಳಿಸು

ನಿನ್ನಲ್ಲಿ ಅವನಾತ್ಮವಿರಲೆಂದು ಹರಸು

ನಿನ್ನೊಲುಮೆ ಸೌಖ್ಯವಿರುವೆಡೆಗದನು ನಡೆಸು


Original by The Browns

There's a village hidden deep in the valley
Among the pine trees half forlorn
And there on a Sunny morning
Little Jimmy Brown was born
All the chapel bells were ringing
In the little valley town
And the song that they were singing
Was for baby Jimmy Brown
Then the little congregation
Prayed for guidance from above
"Lead us not into temptation
Bless this hour of meditation
Guide him with eternal love"
There's a village hidden deep in the valley
Beneath the mountains high above
And there, twenty years thereafter
Jimmy was to meet his love
All the chapel bells were ringing
Was a great day in his life
'Cause the song that they were singing
Was for Jimmy and his wife
Then the little congregation
Prayed for guidance from above
"Lead us not into temptation
Bless oh Lord, this celebration
May their lives be filled with love"
From the village hidden deep in the valley
One rainy morning dark and gray
A soul winged its way to heaven
Jimmy Brown had passed away
Just a lonely bell was ringing
In the little valley town
'Twas farewell that it was singing
To our good old Jimmy Brown
And the little congregation
Prayed for guidance from above
"Lead us not into temptation
May his soul find the salvation
Of thy great eternal love"

No comments:

Post a Comment