ಎದೆಹೂವು ನಲಿವಾಗ
ಸೊದೆಪೂರ ಹರಿವಾಗ
ಬಂದು ಏತಕೊ ಶಂಕೆ ಕಾಡುತಿಹುದು
ನಗೆಯ ಹಿಂದೆಯೆ ಅವಿತು ನೋಡುತಿಹುದು
ಎತ್ತರದ ಗಿರಿ ಮುಕುಟ
ಚುಂಬಿಸಿರೆ ಬಾನ ಪಟ
ಮುಗಿಲೇಕೊ ಮತ್ಸರವ ತೋರುವಂತೆ
ಬೆಳಕ ಮರೆಸುತ ಮಬ್ಬ ಕಾರುವಂತೆ
ಮಾಮರದ ಮರೆಯಲ್ಲಿ
ಕೋಗಿಲೆಯ ದನಿಯಲ್ಲಿ
ಹಾಡೊಂದು ಅರೆಯಾಗಿ ಮುಗಿಯುವಂತೆ
ಅಳುಕೊಂದು ಕಂಠವನು ಬಿಗಿಯುವಂತೆ
ನಿಲ್ಲುತಿದೆ ಅಡಿಗಡಿಗೆ
ಮಾತುಗಳ ಮೆರವಣಿಗೆ
ಭಾವನೌಕೆಗೆ ಉಸಿರು ಸಾಲದಾಗಿ
ತೀರದಲೆ ಉಳಿದಿಹುದು ಮೌನವಾಗಿ
ಪ್ರಕ್ಷುಬ್ಧ ಕಿರಣಗಣ
ಬೇಡಿದೆ ಅನಾವರಣ
ಸಾರ್ಥಕ್ಯದೊಲು ಮೂಡಿ ಬಂದು ಹರಸು
ಸಾಂಗತ್ಯದೊಲು ಕೂಡಿ ಬಂದು ನೆಲೆಸು
No comments:
Post a Comment