ಕೆಲವೊಮ್ಮೆ ಒಂದರಮೇಲೊಂದು ಪದರಗಳನ್ನು ಪೇರಿಸಿಟ್ಟಂತೆ ಮೈಮನಗಳು ಭಾರವೆನಿಸುತ್ತವೆ. ಸಿಹಿಯಾದದ್ದೇನನ್ನೋ ತಿನ್ನುವಾಗ ಎಲ್ಲೋ ಒಗರೋ ಕಹಿಯೋ ಆದ ಕಣವೊಂದರ ರುಚಿ, ಹೇಗೋ ಸಿಕ್ಕಿಬಿಟ್ಟರೆ, ಮನಸ್ಸು ಬಿಡಬೇಕಲ್ಲ! ತಿಂದದ್ದು ಸಿಹಿ ಎಂಬ ನೆನಪೇ ಹೋಗುವಷ್ಟು ' ಏಕಿದು, ಎಲ್ಲಿಂದ ' ಎಂಬ ಪ್ರಶ್ನೆಗಳು ಆವರಿಸತೊಡಗುತ್ತವೆ. ಅಂಥದ್ದೊಂದು ಕ್ಷಣದಲ್ಲಿ ಪುಟ್ಟ ಕೂಸಿನ ಇಂಪಾದ ಮಾತಿನಂತೆ ಒಳದನಿಯೊಂದು ಕೇಳಿಸುತ್ತದೆ. ' ಬಾ, ಆಡೋಣ ' ಎನ್ನುತ್ತಾಳೆ ಪುಟಿವ ಹೆಜ್ಜೆಯ ಮುಗ್ಧ ಬಾಲೆ. ಮತ್ತೆಲ್ಲವನ್ನೂ ಅಲ್ಲೇ ಬಿಟ್ಟು ಅವಳ ಹಿಂದೆ ಹೋಗಿಬಿಡುವುದಾಗುತ್ತದೆ.
ಯಾರೀ ಬಾಲೆ? ಎಲ್ಲಿಯವಳು? ಅವಳು ಬರುತ್ತಿದ್ದಂತೆಯೇ ಅವಳ ನೆಲದ ಚಿರಪರಿಚಿತ ಸೊಗಡು ಸೆಳೆಯುತ್ತದೆ. ಹಿಂದೆ ಅವಳೊಡನೆ ಕೂಡಿ ನಲಿದ ಘಳಿಗೆಗಳಲ್ಲಿ ಒಂದಷ್ಟು ನನ್ನಲ್ಲಿಯೂ ಬೆರೆತುಹೋಗಿರುವ ಸೊಗಡು, ಅದು ಸೆಳೆಯುತ್ತದೆಯೇ ಮತ್ತೆ ಮತ್ತೆ ಅವಳನ್ನೂ?
ಕಂಡೊಡನೆ ನಸುನಗುತ್ತಾ ಕೈ ಹಿಡಿದು ಎಳೆದೊಯ್ಯುತ್ತಾಳೆ. ಆಡಲು ಜೊತೆ ಬೇಕಿರುವುದು ಅವಳಿಗೋ, ನನಗೋ? ಅಂತೂ ನನ್ನಲ್ಲಿನ ಅವಳು, ಅವಳಲ್ಲಿನ ನಾನು, ಹಮ್ಮಿಲ್ಲದೆ ಗೆಳತಿಯರಾಗಿಬಿಡುತ್ತೇವೆ. ನನಗೇ ಗೊತ್ತಿಲ್ಲದ ದಾರಿ, ತಿರುವುಗಳಲ್ಲಿ, ಎಲ್ಲಿಗೋ ಕುಣಿಯುತ್ತಾ ಸಾಗುತ್ತೇವೆ.
ಧೂಳೆದ್ದ, ಒಣಗಿದ, ಮೋಡವಿರದ ಖಾಲಿ ಬಾನಿನ ಬಿಸಿಲ ಝಳದ ನಗರದ ರಸ್ತೆಯಿಂದ ಗಿರಿಯೊಂದನ್ನು ಸುತ್ತುವರೆದ ಸುರುಳಿ ಸುರುಳಿ ರಸ್ತೆಗಳೆಡೆಗೆ ಕ್ಷಣ ಮಾತ್ರದಲ್ಲಿ ತಲುಪಿಬಿಡುತ್ತೇವೆ! ಗಿರಿಯನ್ನು ಏರಿದರೆ, ಅತ್ತ ಕಡಲು, ಇತ್ತ ಕಣಿವೆ; ಸಾರ್ಥಕವೆನಿಸುವ ಪಯಣ. ತನ್ನ ನೆಲದ ಹೊಸ ಹೊಸ ವಿಸ್ಮಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ತವಕವಿದ್ದಂತೆ ಉತ್ಸಾಹದಿಂದ ಪುಟಿಯುತ್ತಲೇ ಸಾಗುತ್ತಾಳೆ! ನಾನು ಕಣ್ಣರಳಿಸಿದರೆ ದಾರಿಯುದ್ದಕ್ಕೂ ಹೆಮ್ಮೆಯಿಂದ ಬೀಗುತ್ತಾಳೆ!
ಅಲ್ಲೆಲ್ಲೋ ಒಂದು ಸುಂದರ ಹೂದೋಟ. ಅದರೊಳಗೆಲ್ಲೋ ಪವಿತ್ರ ಮಡುವಿನ ನಡುವಿನಲ್ಲಿ ಮಂದಿರವೊಂದಿದ್ದೀತು. ಅಲ್ಲಿಂದ ಹೊರಟ ಅಸಂಖ್ಯ ದನಿಗಳ ಘೋಷ ಇಲ್ಲಿನ ಗಾಳಿಯಲ್ಲೆಲ್ಲಾ ಪಸರಿಸಿದಂತಿದೆ. ಒಂದೊಂದು ಎಲೆಗೂ ಅದರದೇ ಲೇಪ!
ಒಂದಿಷ್ಟು ಹೂವು, ಎಲೆ, ಕಡ್ಡಿ, ಮಣ್ಣು ಸೇರಿಸಿ ನಮ್ಮದೇ ಒಂದು ಪುಟ್ಟ ಲೋಕ ಸೃಷ್ಟಿಸುತ್ತೇವೆ. ಸಣ್ಣ ಸಣ್ಣ ಕಲ್ಲುಗಳನ್ನು ಅದರ ಸುತ್ತಲೂ ಜೋಡಿಸಿಟ್ಟರೆ ನಮ್ಮ ಲೋಕದ ಸೀಮೆ. ಸೀಮೆಯಾಚೆಯಿಂದ ಮಣ್ಣು ಬಗೆದು, ನಾಲೆ ಮಾಡಿ, ಅಲ್ಲೇ ಹರಿವ ಪುಟ್ಟ ತೊರೆಯಿಂದ ನಮ್ಮ ಲೋಕದೊಳಗೆ ನೀರು ಹಾಯಿಸುವುದು! ಸೃಷ್ಟಿ ಎಂಬುದು ಸೃಷ್ಟಿಕರ್ತನ ಸ್ವತ್ತು ಮಾತ್ರವೇ!? ನಾವೂ ಸೃಷ್ಟಿಸಬಹುದಲ್ಲಾ!
ಇನ್ನೂ ಎಷ್ಟೆಷ್ಟೋ ಬಗೆಯ ಹೂವು,ಎಲೆ , ಕಲ್ಲುಗಳನ್ನು ತಂದು ಜೋಡಿಸಿ ವಿಸ್ತರಿಸಿ ನಲಿಯುವುದು ಒಮ್ಮೊಮ್ಮೆ. ಇಲದಿದ್ದರೆ ಹಾಗೇ ಸುಮ್ಮನಿದ್ದು ಹರಿವ ನೀರ ಜುಳುಜುಳುವಿನಲ್ಲಿ ಕಳೆದುಹೋಗುವುದು. ಹೀಗೆ ಮನಸ್ಸು ಹಿಡಿಯುವಷ್ಟು ಸೊಗಸನ್ನು ತುಂಬಿಕೊಂಡು ಅಲ್ಲಿಂದ ತೆರಳುವುದು. ಬಂದು ಹೋಗುವಾಗಲೆಲ್ಲ ಇದೇ ಭಾವನೆ. ಅಲ್ಲಿಂದ ಮರಳಿದಾಗ ಮತ್ತೆ ಪದರಗಳ ಹೇರುವಿಕೆ. ಇರಲಿ, ಪದರಪದರಗಳನ್ನು ಆಗಾಗ ಕಳಚಿಬಿಡುವ
ಅವಕಾಶಗಳು ಹೀಗೇ ಬರುತ್ತಿರಲಿ. ಹೋದಹೋದಂತೆಲ್ಲ ಮೈಮನ ಹಗುರಾಗಲಿ. ಆಗ, ನನ್ನನ್ನು ಇನ್ನೂ ಮುಂದೆ, ಆ ಮಡುವಿನ ನಡುವಿಗೂ ಕರೆದುಕೊಂಡು ಹೋಗಿಯಾಳೇ ಅಕ್ಷರಬಾಲೆ?
No comments:
Post a Comment