ಬಿರುಗಾಳಿ, ಮಳೆ, ಬಿಸಿಲುಗಳ ಕರಾಳಗಳೊಳಗೂ ಆ ಏಕಾಂತ ಮೂಲೆಯ ಗಾಜಿನ ಗೂಡಿನಲ್ಲಿ ತನ್ನಷ್ಟಕ್ಕೆ ಅಂತರ್ಮುಖಿಯಾಗಿ ಬೆಚ್ಚಗಿದ್ದೀತು. ಹೊಂಬಿಸಿಲಿನ, ಬೆಳದಿಂಗಳಿನ ದಿನಗಳಲ್ಲಿ ಮತ್ತೆ ಕೆದಕಿ, ಇಣುಕಿ, ಹುದುಗಿಸಿದರಾಯಿತು. ಜಡಿ ಮಳೆಯಾದರೆ ಹಾದಿಯೇ ದುಸ್ತರ. ತೊರೆದ ಬುತ್ತಿಗೆ ಹಾತೊರೆದು ಮರಳಿದಾಗ ಕುರುಚಲು ಪೊದೆಗಳ ನಡುವೆ ಮರದ ಗುರುತು ಹತ್ತದೇ ಇದ್ದೀತು. ಮತ್ತೆ ಬೆದಕಿ ನೋಡುವ ದುಸ್ಸಾಹಸದ ನೆರಳಾಗಿ ನಿರಾಶೆ ಇದ್ದರೆ? ಅನಿಶ್ಚಿತತೆಯೋ ಅಲಕ್ಷ್ಯವೋ, ಭರಣಿಯೊಳಗಿರವುದನ್ನು ಸೋಕದೇ ಇರುವುದೇ ಮೇಲೇ?
ಅಥವಾ
ತನ್ನಿರುವಿಕೆಯ ತೋರಲೋ ಎಂಬಂತೆ ಬಿರಟೆಯ ಬೇಲಿ ಹಾರಿ ಮಣ್ಣಲ್ಲಿ ಬೆರೆತು ಹೋದೀತೇ ಆ ಸೊಗಡು? ಮರವೂ ಹೀರಿ ತನ್ನ ಸುಮಗಳಿಗುಣಿಸೀತೇ! ಅಲ್ಲೆಲ್ಲೋ ತಿಳಿಯದೇ ಹಾದಾಗ, ಪರಿಮಳದ ಗಾಳ ಬೀಸಿ ಸೆಳೆದೀತೇ! ಆಗ, ಆವೇಗದ ದೀರ್ಘೋಚ್ಛ್ವಾಸದ ಎಳೆತಕ್ಕೆ ಅಷ್ಟೂ ಕಂಪು ಬರಿದಾಗಿಬಿಟ್ಟರೆ!
ಬೇಡ! ಇರಲಿ ಅಲ್ಲೇ! ಘ್ರಾಣಶಕ್ತಿ ಕಂತು, ಮೂಲಾಕರದಿಂದ ಮತ್ತೆ ಚೈತನ್ಯವನ್ನು ತೀವುವ ಘಳಿಗೆಯಲ್ಲಿ, ಭರಣಿಯ ನಿಧಿ ಒದಗಿಬಂದೀತು.
*****
ಅರೆರೆ! ಇದೇನು! ನಾನು ಹುದುಗಿಸಿಟ್ಟಿದ್ದ ಭರಣಿಯೆಲ್ಲ ಒಮ್ಮೆಲೇ ಖಾಲಿಯಾದಂತಿದೆಯಲ್ಲ! ಹಾ, ವಿಧಿಯೇ! ನನ್ನ ಹಂಬಲಿಕೆಯನ್ನೆಲ್ಲ ಆ ಪುಟ್ಟ ಗೂಡಿನ ಸಲುವಾಗಿ ಬಚ್ಚಿಟ್ಟಿದ್ದೆನಲ್ಲಾ! ಬೇಸರಿಸಿ ದೂರವಾಯಿತೇ? ಮತ್ಯಾವುದೋ ಹಂಬಲಿಕೆಯ ಪಾಶ ಅದನ್ನು ಸೆಳೆದುಬಿಟ್ಟಿತೇ? ಜೀವಂತಿಕೆ ಯನ್ನೆಲ್ಲ ಹೀರಿ ಎಲ್ಲೋ ಅದೃಶ್ಯವಾಗಿಹೋಯಿತಲ್ಲ! ಈಗೇನಿದ್ದರೂ ಬರಿದೆ ಜಡ, ಸೊಗಡಿಲ್ಲ, ಸೊಂಪಿಲ್ಲ ನಿರಾಶೆಯ ವಿಸ್ತರದ ಬಯಲಿಗೆ ಹತಾಶೆಯ ಬೇಲಿ. ಬಿರು ಬಿಸಿಲಿನ ಮೋಡವಿಲ್ಲದ ನೀಲಿಯಂತೆ ಬರಡು. ಬಣ್ಣದ ಸಂಜೆಗಳ ಸುಳಿವೇ ಇಲ್ಲದ ಕಗ್ಗತ್ತಲು-ಹಗಲುಗಳ ಹೊಯ್ದಾಟ.
ಇಂತಹ ನಿಸ್ತೇಜ ಇರುಳಿನ ಕನಸಿನಲ್ಲಿ ಎಲ್ಲಿಂದಲೋ ಬಂದ ಮಿಂಚು. ಮೈ ಮನಗಳಲ್ಲಿ ಮೆದುವಾಗಿ ಹೆಜ್ಜೆಯೂರಿದ ದಿವ್ಯತೆಯ ನೆರಳು. ನವಿರಾಗಿ ತೂರಿ ಬಂದ ಚಿರಪರಿಚಿತ ಸೊಗಡು! ಅದೇ! ಭರಣಿಯೊಳಗಿನ ನಿಧಿ! ಆದರೆ, ಇದೆಂಥ ಹೊಸತನ! ಹಿಂದೆಂದೂ ಕಾಣದ ಅನೂಹ್ಯ ಸಂವೇದನೆಯೊಂದು ಒಡಲಾಳದಿಂದ ಹೊಮ್ಮಿದಂತಿದೆ. ಮತ್ತೆಂದೂ ಬಾರದಂತೆ ಮರೆಯಾಗಿ ಹೋಗಿದ್ದ ನಿಧಿ ಈ ಹೊತ್ತು, ನನ್ನೊಳಗೇ! ಅದಾವ ಮಾಯೆಯಿಂದ ನನಗೇ ತಿಳಿಯದಂತೆ ನನ್ನೊಳಗೆ ಕರಗಿ ಹೋಯಿತೋ! ನನ್ನ ಅಣುಅಣುವನ್ನೂ ತನ್ನ ಕಂಪಲ್ಲಿ ಮೀಯಿಸಿ, ಅವ್ಯಕ್ತ ಭಾವನೆಗಳನ್ನು ತನ್ನ ಆರ್ದ್ರತೆಯಲ್ಲಿ ತೋಯಿಸಿ, ಕ್ಷಣಮಾತ್ರದಲ್ಲಿ ನನ್ನನ್ನೇ ರೂಪಾಂತರಗೊಳಿಸಿತಲ್ಲ! ಈಗ ನಾನು ನಾನೇ ಅಲ್ಲ! ನನ್ನೊಳಗೆ ಸೇರಿ ಹೋದ ಆ ದಿವ್ಯ ನಿಧಿಯ ಅಭಿವ್ಯಕ್ತಿ ನಾನು. ನನ್ನೊಳಗೆ ಬೆಳಗುವ ಆ ಜ್ಯೋತಿಯ ದೀಪ್ತಿ ನಾನು.
No comments:
Post a Comment