ಎಂದಿನಂತೆ ಸಂಜೆಯ ವೇಳೆಗೆ, ತೂರಿ ಬಂದ ಧೂಳು- ಕಸವನ್ನೆಲ್ಲ ಗುಡಿಸಿದ್ದಾಯಿತು. ಬತ್ತದ ಬಾವಿಯೊಂದಿದೆಯಲ್ಲ, ಮೂಲೆಯಲ್ಲಿ? ನೀರು ಸೇದುವ ಪ್ರಯಾಸಕ್ಕೆ ಫಲವಾಗಿ ಪ್ರಾಕಾರವೆಲ್ಲ ಶುಭ್ರ. ಮುಂಬರುವ ದಿವ್ಯಾನುಭವದ ಮುನ್ಸೂಚನೆಯಂತೆ ಮಣ್ಣಿಗೆ ನೀರು ಸೋಕಿ ಬೀರಿದ ಕಂಪು. ಬಾಗಿಲ ಮುಂದೆ ಅಷ್ಟೋ ಇಷ್ಟೋ ತಿಳಿದಷ್ಟು ಚುಕ್ಕಿಗಳನ್ನಿರಿಸಿ ಬಿಳಿಯ ಗೆರೆಗಳಿಂದ ಅವುಗಳನ್ನು ಒಂದಕ್ಕೊಂದು ಬೆಸೆದ ಮೇಲೆ, ನಾನೆಳೆದ ರೇಖೆಗಳೊಳಗೆ ಕಳೆದುಹೋದ ಚುಕ್ಕಿಗಳು ಚುಕ್ಕಿಗಳಾಗಿ ಉಳಿಯಲೇ ಇಲ್ಲ. ಎಲ್ಲೋ ಅಡ್ಡಾದಿಡ್ಡಿ ಎಳೆದ ಗೆರೆಯೊಂದು ಅಣಕಿಸಿತಾದರೂ. ' ಒಟ್ಟಾರೆ ಚೆನ್ನಿದೆ ' ಎಂಬ ಸಮಾಧಾನ. ಇಷ್ಟೆಲ್ಲಾ ತಯಾರಿ ಏಕೆ? ಕತ್ತಲಲ್ಲಿ ಬರುವ ಅತಿಥಿಗೆ. ಪೂರ್ಣ ಕತ್ತಲಾದರೆ ಬರುವ ಅತಿಥಿಗೆ ಸಲ್ಲ. ಸಣ್ಣ ಸೊಡರಿನ ಬೆಳಕಿರಬೇಕು. ಒಂದಲ್ಲ, ಹತ್ತಾರು ಸೊಡರುಗಳು. ಬತ್ತಿ ಹೊಸೆದು, ಎಣ್ಣೆ ಎರೆವ ತಯಾರಿಯಲ್ಲಿ ಏನೋ ಒಂದು ಧನ್ಯತೆ. ಒಳಗೆ ಸಾಲಾಗಿ ಜೋಡಿಸಿ ಮೊದಲ ಸೊಡರನ್ನು ಬೆಳಗಿಸುವ ವೇಳೆಗೆ ಬೆಳಕಿಗೆ ಸ್ವಾಗತ ಕೋರಲು ಆವರಿಸಿದ ಕತ್ತಲು. ಪ್ರಜ್ವಲನಕ್ಕೆ ಸಿದ್ಧವಾಗಿ ಹಾತೊರೆಯುತ್ತಾ ತುಸುವೇ ಕತ್ತು ಚಾಚಿ ಕುಳಿತ ಬತ್ತಿ ಹೊತ್ತ ಕ್ಷಣದ ದಿವ್ಯತೆಯ ಮೂರ್ತರೂಪವಾಗಿ ಸುತ್ತ ಹೊಮ್ಮಿದ ನವಿರು ಪ್ರಭೆ. ಒಂದರಿಂದಿನ್ನೊಂದು ದೀಪವನ್ನು ಬೆಳಗುವಾಗ ಆ ಭವ್ಯಾನುಭೂತಿಯ ಗುಣಾಕಾರ.
ಎಲ್ಲ ದೀಪಗಳನ್ನು ಬೆಳಗಿಸಿ ಹಿಂದೆ ಸರಿದು ನಿಂತು ನೋಡುವಾಗ, ಶ್ರುತಿಹಿಡಿದು ಸ್ವರವೊಂದನ್ನು ಒಕ್ಕೊರಲಿನಿಂದ ಹಾಡುತ್ತಿರುವ ಸಂಗೀತ ಶಾಲೆಯ ಮಕ್ಕಳಂತೆ ತೋರುವ ನಿಸ್ವಾರ್ಥ, ನಿಷ್ಕಾಮ ಸೊಡರುಗಳ ಬೆಳಕಿನೋಕುಳಿ. ಈ ಸಂತೃಪ್ತಿಯಲ್ಲೂ, ಇನ್ನಾವುದರದೋ ಬರುವಿಕೆಗಾಗಿ ಕಾಯುವ ಮನಸ್ಸಿಗೆ ಈ ಪ್ರತೀಕ್ಷೆ ನಿರಂತರವಾಗಿರಲೆಂಬ ಹಂಬಲ.
No comments:
Post a Comment